ನವಲಗುಂದ: ‘ಮಕ್ಕಳಿಗೆ ಶಿಕ್ಷಣವೇ ದೊಡ್ಡ ಆಸ್ತಿ. ಶಿಕ್ಷಣ ಇದ್ದಲ್ಲಿ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಹೀಗಾಗಿ ಮಕ್ಕಳನ್ನು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಅವರನ್ನು ಶಾಲೆಗೆ ಕರೆತರಬೇಕು. ಇದು ಪಾಲಕರ ಜವಾಬ್ದಾರಿ ಕೂಡ ಆಗಿದೆ‘ ಎಂದು ಪ್ರಭಾರಿ ಮುಖ್ಯಶಿಕ್ಷಕ ಎನ್.ಎಸ್.ತಾಳಿಕೋಟಿಮಠ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಹಾಗೂ ಹೆಣ್ಣುಮಕ್ಕಳ ಶಾಲೆ ನಂ.1ರಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಮಕ್ಕಳಿಗೆ ಗುಲಾಬಿ ಹೂ ಮತ್ತು ಸಿಹಿ ನೀಡಿ ಸ್ವಾಗತಿಸಿ ಮಾತನಾಡಿದ ಅವರು, ‘ಸರ್ಕಾರಿ ಶಾಲೆಗಳಲ್ಲಿ ಪರಿಣತ ಶಿಕ್ಷಕರ ಬಳಗವಿದೆ. ಸರ್ಕಾರದ ಹಲವಾರು ಯೋಜನೆಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ಇದರ ಸದುಪಯೊಗ ಪಡೆದುಕೊಳ್ಳಬೇಕು’ ಎಂದರು.
ಇದೇ ವೇಳೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ’ಮಕ್ಕಳನ್ನು ಶಾಲೆಗೆ ಸೇರಿಸಿ’ ಎಂಬ ಘೋಷಣೆಯನ್ನು ಮಕ್ಕಳು ಕೂಗುವ ಮೂಲಕ ಜಾಗೃತಿ ಮೂಡಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ಮನಕವಾಡ, ಈರಣ್ಣ ಬೆಂಡಿಗೇರಿ, ಪ್ರಧಾನಗುರು ಎಸ್.ಟಿ.ಮೊರಬದ ಶಿಕ್ಷಕರಾದ ಯು.ಪಿ.ದಂಡಿಗದಾಸರ, ಶ್ರೀನಿವಾಸ ನರೇಂದ್ರಕರ, ಡಿ.ಎಚ್.ಮಳಲಿ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜಾಥಾದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.