ADVERTISEMENT

ದತ್ತಾಂಶ ಒತ್ತಡ l ಕಾರ್ಯಾಚರಣೆ ನಿಲ್ಲಿಸಿದ ನಿರ್ಮಾಣ್ 2.0 ಸಾಫ್ಟ್‌ವೇರ್

ಕಟ್ಟಡ ನಿರ್ಮಾಣ ಅನುಮತಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 19:30 IST
Last Updated 9 ಜುಲೈ 2022, 19:30 IST
ನಿರ್ಮಾಣ್–2.0 ಮೇಲೆ ಕ್ಲಿಕ್ ಮಾಡಿದಾಗ ಕಾಣಿಸಿಕೊಳ್ಳುವ ವಿಂಡೊ
ನಿರ್ಮಾಣ್–2.0 ಮೇಲೆ ಕ್ಲಿಕ್ ಮಾಡಿದಾಗ ಕಾಣಿಸಿಕೊಳ್ಳುವ ವಿಂಡೊ   

ಹುಬ್ಬಳ್ಳಿ: ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನಿರ್ಮಾಣ್‌– 2.0 ಸಾಫ್ಟ್‌ವೇರ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು, 12 ದಿನದಿಂದ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇದರಿಂದಾಗಿ, ರಾಜ್ಯದಾದ್ಯಂತ ನಗರ ಗಳಲ್ಲಿ ಕಟ್ಟಡ, ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಅನುಮತಿಗಳು ಬಾಕಿ ಉಳಿದಿವೆ.

‘ನಿರ್ಮಾಣ್‌’ ಸಾಫ್ಟ್‌ವೇರ್‌ನ ಕಾರ್ಯನಿರ್ವಹಣೆಗೆ ಯತ್ನಿಸಿ ಕ್ಲಿಕ್‌ ಮಾಡಿದರೆ, ಎಲ್‌ಬಿಪಿಎಸ್‌ ವೆಬ್‌ಸೈಟ್ ನಿರ್ವಹಣೆಯಲ್ಲಿದೆ. ಸಿಸ್ಟಂ ಅಪ್‌ಗ್ರೇಡ್ ಆದ ಬಳಿಕ ಸರಿ ಹೋಗಲಿದೆ ಎಂಬ ಸಂದೇಶ ಗೋಚರಿಸಲಿದೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ಅರ್ಜಿಗಳ ನಿರ್ವಹಣೆಗೆ ಕರ್ನಾಟಕ ಮುನ್ಸಿಪಲ್‌ ಡೇಟಾ ಸೊಸೈಟಿಯು (ಕೆಎಂಡಿಎಸ್) ‘ನಿರ್ಮಾಣ್–2.0’ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದೆ. ಇದರಿಂದಾಗಿ, ಜನರು ಕಚೇರಿಗೆ ಹೋಗದೆ ಆನ್‌ಲೈನ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಕುಳಿತಲ್ಲಿಯೇ ಅನುಮತಿಯನ್ನು
ಪಡೆಯಬಹುದಿತ್ತು.

ADVERTISEMENT

ಇದೀಗ ಸಾಫ್ಟ್‌ವೇರ್ ಸ್ಥಗಿತಗೊಂಡಿರುವುದರಿಂದ, ಮನೆ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಾಗಿರು ವವರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ತುರ್ತು ಅಗತ್ಯವುಳ್ಳವರು ಅರ್ಜಿ ಹಿಡಿದು ಕಚೇರಿ ಗಳಿಗೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ದತ್ತಾಂಶದ ಒತ್ತಡ

‘ನಿರ್ಮಾಣ್ ಸಾಫ್ಟ್‌ವೇರ್ ಕಟ್ಟಡ ಪರವಾನಗಿಗೆ ಸಂಬಂಧಿಸಿದ ಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆಯಾಗಿದೆ. ಆನ್‌ಲೈನ್‌ ಮೂಲಕ ರಾಜ್ಯದಾದ್ಯಂತ ನಿತ್ಯ ಅರ್ಜಿಗಳು ಸಲ್ಲಿಕೆ ಯಾಗುತ್ತವೆ. ಜೊತೆಗೆ, ಇತರ ಪ್ರಕ್ರಿಯೆಗಳಿಂದಾಗಿ ದತ್ತಾಂಶದ ಒತ್ತಡ ಹೆಚ್ಚಾಗಿದೆ. ಹಾಗಾಗಿ, ಕಾರ್ಯಾಚರಣೆ ನಿಲ್ಲಿಸಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಫ್ಟ್‌ವೇರ್ ನಿರ್ವಹಣೆಯ ಹೊಣೆ ಹೊತ್ತಿರುವ ಕಂಪನಿಯವರು ದೋಷ ಸರಿಪಡಿಸಲು ಸತತ ಪ್ರಯತ್ನ ಮಾಡು ತ್ತಿದ್ದಾರೆ. ಹಾಗಾಗಿ, ಹಳೆಯ ನಿರ್ಮಾಣ್‌–1 ಸಾಫ್ಟ್‌ವೇರ್ ಮೂಲಕ ಅರ್ಜಿಗಳನ್ನು ತಾತ್ಕಾಲಿಕವಾಗಿ ನಿರ್ವ ಹಿಸಲು ಸೂಚನೆ ನೀಡಲಾಗಿದೆ’ ಎಂದರು.

‘ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ’ ಎಂದುಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿಯಹೆಚ್ಚುವರಿ ಕಾರ್ಯದರ್ಶಿ ಹಾಗೂ ಜಂಟಿ ನಿರ್ದೇಶಕಿ ಕೆ.ಎಂ. ಜಾನಕಿ ಹೇಳಿದರು.

ಸಿಬ್ಬಂದಿಯಿಂದ ನಿರ್ವಹಣೆ

‘ಪರವಾನಗಿ ಕೋರಿ ಬರುತ್ತಿದ್ದ ಅರ್ಜಿಗಳನ್ನು ನಿರ್ಮಾಣ್‌ ಸಾಫ್ಟ್‌ವೇರ್ ಸ್ವಯಂ ಪರಿಶೀಲಿಸುತ್ತಿತ್ತು. ಅದರಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿ ಕೊಂಡಿರುವುದರಿಂದ, ಹಳೇ ನಿರ್ಮಾಣ್–1 ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡಲು ಸೂಚನೆ ಬಂದಿದೆ. ಇದರಲ್ಲಿ, ಸೆಟ್‌ಬ್ಯಾಕ್ ಸೇರಿದಂತೆ ನಿರ್ಮಾಣಕ್ಕೆ ಸಂಬಂಧಿಸಿದ ಕೆಲ ಪ್ರಕ್ರಿಯೆಗಳನ್ನು ಸಿಬ್ಬಂದಿ ಭೌತಿಕವಾಗಿ ನಿರ್ವಹಿಸಬೇಕಿದೆ’ ಎಂದುಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಆರ್‌.ಎಂ. ಕುಲಕರ್ಣಿ ತಿಳಿಸಿದರು.

‘ಸಾಫ್ಟ್‌ವೇರ್ ಕಾರ್ಯ ನಿರ್ವಹಣೆ ಸ್ಥಗಿತಗೊಂಡು 12 ದಿನವಾದರೂ, ಸಂಬಂಧಪಟ್ಟವರು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಸಾಫ್ಟ್‌ವೇರ್ ನಿರ್ವಹಣೆಯ ಟೆಂಡರ್ ಪಡೆದಿರುವವರು ಸಮಸ್ಯೆಗೆ ಪರಿಹಾರ ಕಂಡುಹಿಡಿಯದೆ ಕೈ ಚೆಲ್ಲಿ ಕುಳಿತಿದ್ದಾರೆ. ಜನ ಮುಂಚಿನಂತೆ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ನಗರದ ಸಾಮಾಜಿಕ ಕಾರ್ಯಕರ್ತ ಅತೀಕ್ ಕೊಪ್ಪಳ ದೂರಿದರು.

ಭೌತಿಕ ಕಡತಗಳಲ್ಲೇ ನಿರ್ವಹಣೆಗೆ ಸೂಚನೆ

‘ನಿರ್ಮಾಣ್‌–2.0’ ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಕಟ್ಟಡ ಪರವಾನಗಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ವಿಳಂಬವಾಗಿರುವ ಬೆನ್ನಲ್ಲೇ, ಕೆಎಂಡಿಸಿಯು ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಿದೆ.

ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ನಿಯಮಾನುಸಾರವಾಗಿ ಪರಿಶೀಲಿಸಿ, ಭೌತಿಕ ಕಡತಗಳಲ್ಲಿ ಅಥವಾ ಹಿಂದೆ ಇದ್ದ ‘ನಿರ್ಮಾಣ್–1’ ಸಾಫ್ಟ್‌ವೇರ್ ಮೂಲಕ ನಿರ್ವಹಣೆ ಮಾಡಬೇಕು. ‘ನಿರ್ಮಾಣ್‌–2.0’ ಕಾರ್ಯಾಚರಣೆ ಮರು ಆರಂಭದವರೆಗೆ ಹೊಸ ಅರ್ಜಿಗಳನ್ನು ‘ನಿರ್ಮಾಣ್‌–1’ ಮೂಲಕವೇ ನಿರ್ವಹಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.