ADVERTISEMENT

ಹುಬ್ಬಳ್ಳಿ: ಬಿವಿಬಿ ನನ್ನ ತವರು: ಸುಧಾಮೂರ್ತಿ

ಬದುಕು ಕಟ್ಟಿಕೊಟ್ಟ ಕಾಲೇಜಿನ ಋಣ ತೀರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 6:41 IST
Last Updated 29 ಜನವರಿ 2023, 6:41 IST
ಹುಬ್ಬಳ್ಳಿಯ ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜಿನ ಅಮೃತಮಹೋತ್ಸವದ ಅಂಗವಾಗಿ ಶನಿವಾರ ನಡೆದ ಹಳೇವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದಲ್ಲಿ ಇನ್ಫೊಸಿಸ್‍ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾಮೂರ್ತಿ ಮಾತನಾಡಿದರು
ಹುಬ್ಬಳ್ಳಿಯ ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜಿನ ಅಮೃತಮಹೋತ್ಸವದ ಅಂಗವಾಗಿ ಶನಿವಾರ ನಡೆದ ಹಳೇವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದಲ್ಲಿ ಇನ್ಫೊಸಿಸ್‍ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾಮೂರ್ತಿ ಮಾತನಾಡಿದರು   

ಹುಬ್ಬಳ್ಳಿ: ‘ನನ್ನ ಬದುಕಿನ ಪಥವನ್ನೇ ಬದಲಿಸಿದ ಬಿವಿಬಿ ಕಾಲೇಜು ತವರುಮನೆಯಂತೆ. ಇನ್ಫೊಸಿಸ್‌, ಪದ್ಮಭೂಷಣ ಪುರಸ್ಕಾರಕ್ಕಿಂತಲೂ ಹೆಚ್ಚಿನದಾದ ಜೀವನ ಪಾಠ ಕಲಿಸಿದೆ’ ಎಂದು ಇನ್ಫೊಸಿಸ್‍ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾಮೂರ್ತಿ ಹೇಳಿದರು.

ನಗರದ ಬಿ.ವಿ.ಭೂಮರಡ್ಡಿ ಎಂಜಿನಿಯರಿಂಗ್‌ ಕಾಲೇಜಿನ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಡಾ.ಪ್ರಭಾಕರ ಕೋರೆ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹಳೇ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾವಲಂಬನೆ, ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದೆಂಬ ಅರಿವು, ಅಂದಿನ ಕೆಲಸವನ್ನು ಅಂದೇ ಮಾಡಬೇಕೆಂಬ ಪ್ರಜ್ಞೆ, ಜಗಳ ಮಾಡದೆ ತಾವು ದೃಢವಾಗಿ ನಂಬಿದ್ದನ್ನು ಯಾರೇ ವಿರೋಧಿಸಿದರೂ ಬಿಡಬಾರದೆಂಬ ಛಲವನ್ನು ಕಾಲೇಜು ಕಲಿಸಿದೆ. ಎಂತಹ ಸಂಕಷ್ಟ ಬಂದರೂ ಎದೆಗುಂದದೆ ಎದುರಿಸಬೇಕೆಂಬ ಆತ್ಮವಿಶ್ವಾಸ, ಚೈತನ್ಯ ನೀಡಿದ್ದು ಸಹ ಇದೇ ಕಾಲೇಜು’ ಎಂದು ಹೇಳಿದರು.

ADVERTISEMENT

‘ಉನ್ನತ ಹುದ್ದೆಗಳಲ್ಲಿ ಇರುವ ಹಳೇ ವಿದ್ಯಾರ್ಥಿಗಳು ಕಾಲೇಜಿಗೆ ಏನಾ
ದರೂ ಕೊಡುಗೆ ನೀಡಬೇಕು. ತಂದೆ-ತಾಯಿಯ ಋಣದಂತೆ, ಬದುಕು ಕಟ್ಟಿಕೊಟ್ಟ ಕಾಲೇಜಿನ ಋಣವನ್ನೂ ತೀರಿಸಬೇಕು’ ಎಂದು ಸಲಹೆ ನೀಡಿದರು.

ಸಚಿವ ಮುರುಗೇಶ ನಿರಾಣಿ ಮಾತನಾಡಿ, ‘ನೂರಾರು ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ದಿವಾನರಾಗಿದ್ದ ಸರ್‌.ಎಂ. ವಿಶ್ವೇಶ್ವರಯ್ಯ ಅವರು ಕೈಗಾರಿಕೆಗಳನ್ನು ಸ್ಥಾಪಿಸಿದ್ದರು. ಇಂದಿಗೂ ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯ ಹೆಸರುವಾಸಿಯಾಗಿದೆ. ಹೊಸ ಕೈಗಾರಿಕಾ ನೀತಿ ಮೂಲಕ ಉದ್ಯಮಗಳ ಸ್ಥಾಪನೆಗೆ ಸರ್ಕಾರ ಸಹಾಯಧನ ನೀಡುತ್ತಿದ್ದು, ಯುವಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಅಶೋಕ ಶೆಟ್ಟರ್, ಕುಲಸಚಿವ ಡಾ. ಬಸವರಾಜ ಎಸ್. ಅನಾಮಿ, ಶೈಕ್ಷಣಿಕ ನಿಕಾಯದ ಮುಖ್ಯಸ್ಥ ಪ್ರಕಾಶ ಜಿ. ತೇವರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.