ADVERTISEMENT

ಗುಡಗೇರಿ | ಕೊಟ್ಟಿಗೆ: ಬಾರದ ಅನುದಾನ

ಬಿಲ್ ಪಾವತಿ ನಿರೀಕ್ಷೆಯಲ್ಲಿ ಪಂಚಾಯಿತಿ ಕಚೇರಿಗೆ ಎಡತಾಕುತ್ತಿರುವ ರೈತರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 5:48 IST
Last Updated 18 ಜೂನ್ 2025, 5:48 IST
ಗುಡಗೇರಿ ಗ್ರಾಮದಲ್ಲಿ ಗಂಗಾಧರ ಗಿರಮಲ ಅವರು ನಿರ್ಮಿಸಿಕೊಂಡ ದನದ ಕೊಟ್ಟಿಗೆ
ಗುಡಗೇರಿ ಗ್ರಾಮದಲ್ಲಿ ಗಂಗಾಧರ ಗಿರಮಲ ಅವರು ನಿರ್ಮಿಸಿಕೊಂಡ ದನದ ಕೊಟ್ಟಿಗೆ   

ಗುಡಗೇರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿ ದನದ ಕೊಟ್ಟಿಗೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಆಗದ ಕಾರಣ ರೈತರು ಗ್ರಾಮ ಪಂಚಾಯಿತಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯೋಜನೆಯ ಲಾಭ ಪಡೆಯಲು ಗುಡಗೇರಿ ಗ್ರಾಮ ಪಂಚಾಯಿತಿಯಲ್ಲಿ 2020-21ರಿಂದ 2025-26ನೇ ಸಾಲಿನ ಅವಧಿಯಲ್ಲಿ ಅನೇಕ ರೈತರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 26 ಫಲಾನುಭವಿಗಳಿಗೆ ಈವರೆಗೆ ಅನುದಾನ ಬಿಡುಗಡೆ ಆಗಿಲ್ಲ.

ಗುಡಗೇರಿ ಗ್ರಾಮದ ರೈತ ಗಂಗಾಧರ ಗಿರಿಮಲ ಅವರು ಈ ಯೋಜನೆಯ ಫಲಾನುಭವಿ. ಅವರು 2023–24ನೇ ಸಾಲಿನಲ್ಲಿ ಸಾಲ ಮಾಡಿ ಕೊಟ್ಟಿಗೆ ನಿರ್ಮಿಸಿಕೊಂಡಿದ್ದರು. ಅವರಿಗೆ ಈವರೆಗೆ ಕೂಲಿ ಮೊತ್ತ ಮಾತ್ರ ಬಿಡುಗಡೆಯಾಗಿದ್ದು, ಸಾಮಗ್ರಿಯ ಬಿಲ್ ಪಾವತಿ ಆಗಿಲ್ಲ.

ADVERTISEMENT

ತಾಂತ್ರಿಕ ತೊಂದರೆಯಿಂದ ಅನುದಾನ ಬಿಡುಗಡೆಗೊಂಡಿಲ್ಲ ಎಂದು ಪಂಚಾಯಿತಿಯವರು ಸಮಜಾಯಿಷಿ ಕೊಡುತ್ತಿದ್ದಾರೆ. ಹೀಗೆ 2019–26ರ ಅವಧಿಯಲ್ಲಿ ಕುಂದಗೋಳ ತಾಲ್ಲೂಕಿನಲ್ಲಿ ಒಟ್ಟು 664 ಫಲಾನುಭವಿಗಳಿಗೆ ಇದುವರೆಗೂ ಅನುದಾನ ಬಿಡುಗಡೆಗೊಂಡಿಲ್ಲ.

‘ಮೊದಲು ವೆಂಡರ್ ಮೂಲಕ ಹಣ ಬಿಡುಗಡೆಗೊಳ್ಳುತ್ತಿತ್ತು. ಆದರೆ ಈಗ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುವಂತೆ ಆದೇಶವಾಗಿದೆ. ಕೆಲವು ತಾಂತ್ರಿಕ ತೊಂದರೆಯಿಂದ ಪಾವತಿ ವಿಳಂಬವಾಗಿದೆ. ಸಮಸ್ಯೆ ಪರಿಹರಿಸಲಾಗುತ್ತಿದ್ದು, ಎಲ್ಲ ಫಲಾನುಭವಿಗಳಿಗೆ ಹಣ ಜಮೆ ಆಗಲಿದೆ’ ಎಂದು ಗುಡಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರತ್ನಾಕರ ಆರ್.ಡಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಕಾಲದಲ್ಲಿ ಹಣ ಪಾವತಿಯಾದಾಗ ಮಾತ್ರ ಸರ್ಕಾರದ ಯೋಜನೆಗಳಿಂದ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಸಾಲ ಮಾಡಿ ಕಾಮಗಾರಿ ಮಾಡಿಸಿಕೊಂಡು ಅನುದಾನದ ನಿರೀಕ್ಷೆಯಲ್ಲಿ ಇರುವವರಿಗೆ ತೊಂದರೆ ಉಂಟಾಗುತ್ತದೆ. ಇನ್ನಾದರೂ ಅಧಿಕಾರಿಗಳು, ಜನ ಪ್ರತಿನಿಧಿಗಳು ಫಲಾನುಭವಿಗಳಿಗೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಫಲಾನುಭವಿಗಳ ಒತ್ತಾಯ.

ಕೂಲಿಯಷ್ಟೇ ಪಾವತಿ; ಸಾಮಗ್ರಿ ಬಿಲ್ ಬಾಕಿ ಮನರೇಗಾ ಯೋಜನೆಯಡಿ ದನದ ಕೊಟ್ಟಿಗೆ ಕಟ್ಟಿಕೊಂಡ ರೈತರು ಸಮಸ್ಯೆ ಶೀಘ್ರ ಪರಿಹಾರ: ಅಧಿಕಾರಿಗಳ ಭರವಸೆ

ಕೆಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿ ಮತ್ತು ಸಾಮಗ್ರಿ ಅನುಪಾತ ಪಾಲಿಸದ ಕಾರಣ ಈ ಸಮಸ್ಯೆ ಉಂಟಾಗಿದೆ

- ಪಾಡುರಂಗ ಹಟ್ಟಿ ಮನರೇಗಾ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.