ಚಂದ್ರಕಾಂತ ಬೆಲ್ಲದ
ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಭಾನುವಾರ ಕಾರ್ಯಭಾರ ವಹಿಸಿಕೊಂಡಿದ್ದಾರೆ. 135 ವರ್ಷಗಳ ಇತಿಹಾಸವಿರುವ ಈ ಸಂಸ್ಥೆಯು ನಾಡಿನ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿ ಫೋಷಣೆ, ಗ್ರಂಥ ಪ್ರಕಟಣೆ ಉದ್ದೇಶಗಳನ್ನು ಹೊಂದಿದೆ. ಸಂಸ್ಥೆಯ ಅಭಿವೃದ್ಧಿ, ಮುಂದಿನ ಕಾರ್ಯಚಟುವಟಿಕೆಗಳ ರೂಪುರೇಷೆ ಕುರಿತು ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹಾಗೂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
* ಸಂಘದ ಅಭಿವೃದ್ಧಿ ನಿಟ್ಟಿನಲ್ಲಿ ಮುಂದಿನ ನಡೆ ಹೇಗಿರುತ್ತದೆ?
ಸಂಘದ ಬಗ್ಗೆ ಪ್ರೀತಿ, ಅಭಿಮಾನವಿರುವವರ ಅಭಿಪ್ರಾಯಗಳು, ಸಲಹೆಗಳನ್ನು ಪಡೆದು ಸಂಘದ ಅಭಿವೃದ್ಧಿ, ಕನ್ನಡದ ಕಾಯಕ ಮಾಡುತ್ತೇವೆ. ಕನ್ನಡ ನುಡಿ, ನಾಡನ್ನು ಬೆಳಸಬೇಕು ಎಂಬುದು ಎಲ್ಲ ಕನ್ನಡಿಗರ ಆಶಯ. ಸಂಘದ ಎಲ್ಲ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಒಟ್ಟುಗೂಡಿ ಹೊಸ ಕಾರ್ಯಕ್ರಮ, ಯೋಜನೆ ರೂಪಿಸುತ್ತೇವೆ.
* ಸಂಘದಲ್ಲಿ ಹೊಸಬರಿಗೆ, ಯುವಜನರಿಗೆ ಅವಕಾಶ ಕಲ್ಪಿಸಬೇಕೆಂಬ ಕೂಗಿನ ಕುರಿತು ನಿಮ್ಮ ಅಭಿಪ್ರಾಯ ಏನು?
ಹೊಸಬರು, ಯುವಜನರು ಆಸಕ್ತಿಯಿಂದ ಸಂಘದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಕನ್ನಡಕ್ಕಾಗಿ ಮತ್ತು ಸಂಘದ ಏಳಿಗೆಗಾಗಿ ಶ್ರಮಿಸಬೇಕು. ಸಂಘಟನಾ ಚಾತುರ್ಯ ಬೆಳೆಸಿಕೊಳ್ಳಬೇಕು. ಉತ್ತಮವಾಗಿ ಕೆಲಸ ಮಾಡುವ ಶಕ್ತಿ ಇರುವವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಅವಕಾಶ ಸಿಕ್ಕಿಲ್ಲ ಎಂದು ಕೊರಗಬಾರದು.
* ಸಾಹಿತ್ಯ ಚಟುವಟಿಕೆ ಪಸರಿಸಲು, ಸಾಹಿತ್ಯ ಓದಲು ಮತ್ತು ಬರೆಯಲು ಯುವಜನರನ್ನು ಪ್ರೋತ್ಸಾಹಿಸಲು ಯಾವ ರೀತಿಯ ಕಾರ್ಯಕ್ರಮ ರೂಪಿಸುತ್ತೀರಿ?
ಇಲ್ಲಿನ ಬಹಳಷ್ಟು ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಂಘವು ನಿರಂತರವಾಗಿ ಕಾರ್ಯಕ್ರಮಗಳನ್ನು (ಕವಿಗೋಷ್ಠಿ, ಸಮ್ಮೇಳನ, ಪ್ರಬಂಧ ಸ್ಪರ್ಧೆ, ನಾಟಕ...) ನಡೆಸುತ್ತಿದೆ. ವೇದಿಕೆಗಳನ್ನು ಪ್ರತಿಭೆ ಪ್ರದರ್ಶನಕ್ಕೆ ಅವಕಾಶಗಳನ್ನು ಕಲ್ಪಿಸುತ್ತಿದೆ. ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದೆ. ಯುವಪ್ರತಿಭೆಗಳು ಸಂಘದ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕು. ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ಅವಕಾಶಗಳನ್ನು ಬಳಕೆಮಾಡಿಕೊಂಡರೆ ಉನ್ನತ ಸಾಧನೆ ಮಾಡಬಹುದು. ಯುವಜನರು ಓದುವ, ಬರೆಯುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು.
* ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸುತ್ತೀರಾ?
ಕನ್ನಡ ಶಾಲೆ ಉಳಿಸಲು ಹೋರಾಟ ಮಾಡುವ ಅಗತ್ಯ ಇದ್ದರೆ ಖಂಡಿತವಾಗಿಯೂ ಆ ಕಾರ್ಯ ಮಾಡುತ್ತೇವೆ. ಕನ್ನಡದ ಕೆಲಸಕ್ಕಾಗಿ ಸಂಘ ಸದಾ ಸಿದ್ಧವಾಗಿರುತ್ತದೆ.
* ಸಂಘದ ಆಡಳಿತ ಮಂಡಳಿ, ಸಮಿತಿಗಳಲ್ಲಿ ಸಾಹಿತಿಗಳ ಸಂಖ್ಯೆ ಕಡಿಮೆಯಾಗುತ್ತಿದೆಯೇ? ಸದಸ್ಯತ್ವ ಹೆಚ್ಚಳಕ್ಕೆ ಗಮನ ಹರಿಸುತ್ತೀರಾ?
ಆಡಳಿತ ಮಂಡಳಿಯಲ್ಲಿ ಸಾಹಿತಿಗಳು ಇದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಅವಕಾಶ ಇದೆ. ಸಾಮರ್ಥ್ಯ ಇದ್ದವರು ಆಯ್ಕೆಯಾಗುತ್ತಾರೆ. ಸಂಘದಲ್ಲಿ ಸಾಹಿತಿಗಳು ಇದ್ದಾರೆ. ಸಂಘದ ಸದಸ್ಯತ್ವ ಹೆಚ್ಚಳಕ್ಕೂ ಗಮನ ಹರಿಸುತ್ತೇವೆ. ಸಂಘದ ಸಮಗ್ರ ಅಭಿವೃದ್ಧಿ ನಮ್ಮ ಗುರಿ.
ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಭಾನುವಾರ ಕಾರ್ಯಭಾರ ವಹಿಸಿಕೊಂಡಿದ್ದಾರೆ. 135 ವರ್ಷಗಳ ಇತಿಹಾಸವಿರುವ ಈ ಸಂಸ್ಥೆಯು ನಾಡಿನ ಭಾಷೆ ಸಾಹಿತ್ಯ ಕಲೆ ಜನಪದ ಸಂಸ್ಕೃತಿ ಫೋಷಣೆ ಗ್ರಂಥ ಪ್ರಕಟಣೆ ಉದ್ದೇಶಗಳನ್ನು ಹೊಂದಿದೆ. ಸಂಸ್ಥೆಯ ಅಭಿವೃದ್ಧಿ ಮುಂದಿನ ಕಾರ್ಯಚಟುವಟಿಕೆಗಳ ರೂಪುರೇಷೆ ಕುರಿತು ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹಾಗೂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.