ADVERTISEMENT

ವಿಚಾರಣೆ ನೆಪದಲ್ಲಿ ಹಲ್ಲೆ ಆರೋಪ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 10:23 IST
Last Updated 7 ನವೆಂಬರ್ 2019, 10:23 IST
ಕಿಮ್ಸ್‌ಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮಣ ಇಂದರಗಿ
ಕಿಮ್ಸ್‌ಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮಣ ಇಂದರಗಿ   

ಹುಬ್ಬಳ್ಳಿ: ವಿಚಾರಣೆ ನೆಪದಲ್ಲಿ ಸೆಟ್ಲಮೆಂಟ್‌ ನಿವಾಸಿ ಲಕ್ಷ್ಮಣ ಇಂದರಗಿ ಅವರನ್ನು ಶಹರ ಠಾಣೆ ಪೊಲೀಸರು ಮನ ಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಿ ಅವರ ಸಂಬಂಧಿಕರು ಹಾಗೂ ಸೆಟ್ಲಮೆಂಟ್‌ ನಿವಾಸಿಗಳು ಬುಧವಾರ ಕಿಮ್ಸ್‌ ಆವರಣದ ಎದುರು ಪ್ರತಿಭಟನೆ ನಡೆಸಿದರು.

ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಗಣೇಶ ಪೇಟೆ ಬಳಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ ಮನೋಜ ಹಾಗೂ ಭರತ ಇಂದರಗಿ ಆರೋಪಿಗಳಾಗಿದ್ದಾರೆ. ಅವರಲ್ಲಿ ಪ್ರಕಾಶ ಹಾಗೂ ಮನೋಜ ಅವರನ್ನು ಬಂಧಿಸಲಾಗಿತ್ತು. ಮತ್ತೊಬ್ಬ ಆರೋಪಿ ಭರತ ಇಂದರಗಿ ತಲೆಮರೆಸಿಕೊಂಡಿದ್ದರಿಂದ ಅವನ ತಂದೆ ಲಕ್ಷ್ಮಣ ಅವರನ್ನು ಠಾಣೆಗೆ ಕರೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ ಶಿವಾನಂದ ಮುತ್ತಣ್ಣವರ ಆರೋಪಿಸಿದರು.

‘ತಪ್ಪು ಯಾರು ಮಾಡಿದ್ದಾರೆ ಅವರಿಗೆ ಶಿಕ್ಷೆ ನಿಡಬೇಕು. ಆದರೆ, ಏನೂ ಅರಿಯದ ವೃದ್ಧರಾಗಿರುವವರನ್ನು ಠಾಣೆಗೆ ಕರೆಸಿ, ಮಗ ಎಲ್ಲಿದ್ದಾನೆ ಹೇಳು ಎಂದು ಪೊಲೀಸರು ಹಲ್ಲೆ ನಡೆಸಿರುವುದು ಸರಿಯಲ್ಲ’ ಎಂದರು.

ADVERTISEMENT

‘ಪೊಲೀಸರ ದೌರ್ಜನ್ಯದಿಂದ ಗಂಡ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ನೆಪದಲ್ಲಿ ಪೊಲೀಸರು ಬೂಟುಗಾಲಲಲ್ಲಿ ಒದ್ದು, ಚಿತ್ರ ಹಿಂಸೆ ನೀಡಿದ್ದಾರೆ ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ. ನಮ್ಮ ಸಂಬಂಧಿಕರನ್ನೆಲ್ಲ ಕರೆದು ವಿಚಾರಣೆ ಮಾಡುತ್ತ, ಹಿಂಸೆ ಕೊಡುತ್ತಿದ್ದಾರೆ’ ಎಂದು ಲಕ್ಷ್ಮಣ ಅವರ ಪತ್ನಿ ಶಾರದಾ ಇಂದರಗಿ ಆರೋಪಿಸಿದರು.

‘ಆರೋಪಿಯಾಗಿರುವ ಮಗನ ಪತ್ತೆಗೆ ಪೊಲೀಸರು ಲಕ್ಷ್ಮಣ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಕಳುಹಿಸಿಕೊಟ್ಟಿದ್ದಾರೆ. ವಿಚಾರಣೆ ವೇಳೆ ಪೊಲೀಸರು ಹಲ್ಲೆ ನಡೆಸುವುದಿಲ್ಲ. ಮೂವರೂ ಮಕ್ಕಳು ಸಹ ಆರೋಪಿಯಾಗಿದ್ದಾರೆ ಎಂದು ಮಾನಸಿಕವಾಗಿ ಅಸ್ವಸ್ಥರಾಗಿರಬಹುದು’ ಎಂದು ಪೊಲೀಸ್ ಕಮಿಷನರ್‌ ಆರ್‌. ದಿಲೀಪ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.