ADVERTISEMENT

ಅಪಾಯಕಾರಿ ಕಂಬ ತೆರವುಗೊಳಿಸಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 19:30 IST
Last Updated 12 ಜನವರಿ 2022, 19:30 IST
ಹುಬ್ಬಳ್ಳಿಯ ಕುಲಕರ್ಣಿ ಹಕ್ಕಲದ ವಿದ್ಯುತ್‌ ಕಂಬ ಬೀಳುವ ಸ್ಥಿತಿ ತಲುಪಿದೆ
ಹುಬ್ಬಳ್ಳಿಯ ಕುಲಕರ್ಣಿ ಹಕ್ಕಲದ ವಿದ್ಯುತ್‌ ಕಂಬ ಬೀಳುವ ಸ್ಥಿತಿ ತಲುಪಿದೆ   

ಹುಬ್ಬಳ್ಳಿ: ನಗರದ ಕುಲಕರ್ಣಿ ಹಕ್ಕಲದ 1ನೇ ಕ್ರಾಸ್‌ (ಸಮುದಾಯ ಭವನ ಹಿಂಭಾಗ) ಮನೆ ಮುಂದೆ ಅಳವಡಿಸಲಾಗಿರುವ ವಿದ್ಯುತ್‌ ಕಂಬ ಅಪಾಯಕಾರಿ ಸ್ಥಿತಿಯಲ್ಲಿದ್ದು ತುರ್ತಾಗಿ ಸ್ಥಳಾಂತರಿಸಿ.

ಕಂಬದ ಮೇಲಿನ ಭಾಗದ ಸಿಮೆಂಟ್‌ ಬಹುತೇಕ ಕಿತ್ತುಹೋಗಿ ಒಳಗಿನ ಕಬ್ಬಿಣದ ರಾಡುಗಳು ಕಾಣಿಸುತ್ತಿದ್ದು, ಯಾವುದೇ ಸಮಯದಲ್ಲಿ ಬೀಳುವ ಅಪಾಯವಿದೆ. ಇದೇ ಸ್ಥಳದಲ್ಲಿ ನಿತ್ಯ ಮಕ್ಕಳು ಆಟವಾಡುತ್ತಾರೆ. ಮಹಿಳೆಯರು ಬಟ್ಟೆ ಒಗೆಯುತ್ತಾರೆ. ಮುಂದೆ ಅನಾಹುತಕ್ಕೆ ಅವಕಾಶ ಕೊಡುವ ಬದಲು ಮೊದಲೇ ಎಚ್ಚೆತ್ತುಕೊಳ್ಳುವಂತೆ ಹೆಸ್ಕಾಂನವರಿಗೆ ಮೌಖಿಕವಾಗಿ ಹಾಗೂ ಲಿಖಿತವಾಗಿ ಹೇಳಿದ್ದೇವೆ. ಪಾಲಿಕೆ ಸದಸ್ಯ ಹಾಗೂ ಕ್ಷೇತ್ರದ ಶಾಸಕರ ಮೂಲಕವೂ ಹೇಳಿಸಿದ್ದೇವೆ. ಆದರೆ, ವಿದ್ಯುತ್‌ ಕಂಬ ಮಾತ್ರ ತೆರವು ಆಗಿಲ್ಲ. ಕಂಬಕ್ಕೆ ಸರ್ವಿಸ್‌ ತಂತಿ ಸಂಪರ್ಕ ಕಲ್ಪಿಸಲಾಗಿದ್ದು, ತುರ್ತಾಗಿ ಸ್ಥಳಾಂತರ ಮಾಡಬೇಕು. ಸ್ಥಳೀಯರ ಆತಂಕ ದೂರ ಮಾಡಬೇಕು.

–ಶಂಕರ ಅಜಮನಿ, ಸಮತಾ ಸೈನಿಕ ದಳ ಉತ್ತರ ಕರ್ನಾಟಕ ಅಧ್ಯಕ್ಷ

ADVERTISEMENT

ಚರಂಡಿ ನೀರಿನ ವಾಸನೆಗೆ ಮುಕ್ತಿ ಯಾವಾಗ?

ಹುಬ್ಬಳ್ಳಿಯ ಸಿಬಿಟಿಗೆ ತೆರಳುವ ಮರಾಠ ಗಲ್ಲಿ ರಸ್ತೆ ಪಕ್ಕದ ಒಳಚರಂಡಿ ‌ನೀರು ರಸ್ತೆ ಮೇಲೆಲ್ಲಾ ಹರಿದು ನಿತ್ಯ ವಾಸನೆ ಬರುತ್ತಿದೆ. ಇದರಿಂದ ಅಲ್ಲಿನ ಸುತ್ತಮುತ್ತಲಿನ ಅಂಗಡಿಯವರಿಗೆ ಹಾಗೂ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ.

ಜನರಿಗೆ ಈಗ ಮೊದಲೇ ಆನಾರೋಗ್ಯದ ಭೀತಿ ಕಾಡುತ್ತಿದೆ. ಚರಂಡಿ ನೀರು ರಸ್ತೆ ಮೇಲೆ ಹರಿಯುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಆದ್ದರಿಂದ ಚರಂಡಿ ಮೇಲೆ ಹರಿಯುವ ನೀರನ್ನು ದಿನಕ್ಕೆ ಒಂದು ಬಾರಿಯಾದರೂ ಸ್ವಚ್ಛಗೊಳಿಸಬೇಕು ಅಥವಾ ನೀರು ಗಟಾರಕ್ಕೆ ಹರಿಯುವಂತೆ ಮಾಡಬೇಕು ಎಂದು ಮಹಾನಗರ ಪಾಲಿಕೆಗೆ ಮೂರು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಅಧಿಕಾರಿಗಳು ಸ್ಪಂದಿಸಬೇಕು. ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು.

ಪ್ರೇಮಾನಂದ ಬಿಜಾಪುರ, ಮರಾಠ ಗಲ್ಲಿ.

ಚರಂಡಿ ಸ್ವಚ್ಛಗೊಳಿಸಿ

ಹುಬ್ಬಳ್ಳಿಯ ಸಿದ್ಧಾರೂಢ ಕಾಲೊನಿ ಹೆಗ್ಗೇರಿಯಲ್ಲಿ ಎರಡು ವರ್ಷಗಳಿಂದ ಚರಂಡಿ ಸ್ವಚ್ಛತೆ ಕೊರತೆ ಇದೆ. ಆಗಾಗ ಚರಂಡಿ ತುಂಬಿ ಹರಿದು ಗಬ್ಬೆದ್ದು ನಾರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿಯೂ ಕಾಡುತ್ತಿದೆ. ಮಳೆ ಬಂದಾಗ ಹಾಗೂ ಕುಡಿಯುವ ನೀರು ಬಿಟ್ಟಾಗ ಚರಂಡಿ ತುಂಬಿ ಅದರ ನೀರು ಮನೆಯ ಮುಂಭಾಗದಲ್ಲಿ ಹರಿಯುತ್ತದೆ. ಚರಂಡಿ ನೀರು ಸರಾಗವಾಗಿ ಹರಿದುಹೋಗಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಉಪಯೋಗವಾಗಿಲ್ಲ. ಪಾಲಿಕೆಯವರು ತಾತ್ಕಾಲಿಕವಾಗಿ ಸ್ವಚ್ಛಗೊಳಿಸಿ ಹೋಗುತ್ತಾರೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಲಿ. ‌

ಮಂಜುನಾಥ ಆಲೂರು, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.