ADVERTISEMENT

ಅಂಬೇಡ್ಕರ್ ಹೇಳಿಕೆ ಸಾಬೀತುಪಡಿಸದಿದ್ದರೆ ಸಿ.ಎಂ ರಾಜೀನಾಮೆ ನೀಡಲಿ: ಛಲವಾದಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 13:28 IST
Last Updated 15 ಏಪ್ರಿಲ್ 2025, 13:28 IST
ಚಲವಾದಿ ನಾರಾಯಣಸ್ವಾಮಿ
ಚಲವಾದಿ ನಾರಾಯಣಸ್ವಾಮಿ   

ಹುಬ್ಬಳ್ಳಿ: ‘ಸಾವರ್ಕರ್‌ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದರೆಂದು ಬಿ.ಆರ್‌. ಅಂಬೇಡ್ಕರ್‌ ಪತ್ರ ಬರೆದಿದ್ದಾರೆ ಎಂದು ಹೇಳಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಕ್ಷಿ ಸಮೇತ ಸಾಬೀತುಪಡಿಸಬೇಕು. ಇಲ್ಲದಿದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ರಾಜಕೀಯದಿಂದ ಸನ್ಯಾಸ ಪಡೆಯಬೇಕು’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು. 

‘ಸಿದ್ದರಾಮಯ್ಯ ಅವರು ಸಾಕ್ಷೀಕರಿಸಿದರೆ, ನಾನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಇದೇ ವಿಷಯವನ್ನು ವಿಧಾನ ಪರಿಷತ್‌ನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರು ಹೇಳಿದಾಗ, ನಾನು ವಿರೋಧಿಸಿದ್ದೆ. ಅವರು ಹೇಳಿದ್ದ ಆ ಸುಳ್ಳನ್ನೇ ಈಗ ಮುಖ್ಯಮಂತ್ರಿ ಪುನರುಚ್ಚರಿಸಿದ್ದಾರೆ. ಪ್ರಿಯಾಂಕ ಖರ್ಗೆ ಮಾತನ್ನು ಯಾರೂ ನಂಬುವುದಿಲ್ಲ. ಆದರೆ, ಸಿದ್ದರಾಮಯ್ಯ ಅವರನ್ನು ಜನ ನಂಬುತ್ತಾರೆ. ಆದರೆ, ಈಗ ಅವರೇ ಸುಳ್ಳು ಹೇಳಿದರೆ ಹೇಗೆ?’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. 

‘ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದಾರೆ.  ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನಾಕ್ರೋಶವಿದೆ. 5 ಗ್ಯಾರಂಟಿ ಯೋಜನೆಗಳ ಮೇಲೆ 5 ವರ್ಷ ಆಡಳಿತ ಪೂರ್ಣಗೊಳಿಸಿದರೆ ಸಾಕು ಎಂಬ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ’ ಎಂದು ಅವರು ಹೇಳಿದು.

ADVERTISEMENT

‘ಜನಗಣತಿ ಮಾಡಲು ರಾಜ್ಯಕ್ಕೆ ಅಧಿಕಾರ ಇಲ್ಲ. ಕೇಂದ್ರ ಸರ್ಕಾರ ಮಾತ್ರ ಮಾಡಬೇಕು. 10 ವರ್ಷಗಳ ಹಿಂದೆ ಗಣತಿ ಮಾಡಿದ್ದಾಗಲೂ ಜನರು ವಿರೋಧ ವ್ಯಕ್ತಪಡಿಸಿದ್ದರು. ಈಗಲೂ ಜನರ ವಿರೋಧವಿದೆ. ಲಿಂಗಾಯತ ಸಮಾಜ, ಒಕ್ಕಲಿಗ ಸಮಾಜವನ್ನು ಗುಂಪುಗಳಾಗಿ ಒಡೆದಿದ್ದಾರೆ. ಪರಿಶಿಷ್ಟರಲ್ಲೂ ಇಬ್ಭಾಗ ಮಾಡಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.