ADVERTISEMENT

ಸೇತುವೆ ಒಡೀತಂತ ಊರ ಉಳಿದೈತಿ

ಹಾರೋಬೆಳವಡಿ ಬಳಿ ಕೊಚ್ಚಿಹೋದ ಸೇತುವೆ; ಧಾರವಾಡ–ಸವದತ್ತಿ ಸಂಪರ್ಕ ಕಡಿತ

ಇ.ಎಸ್.ಸುಧೀಂದ್ರ ಪ್ರಸಾದ್
Published 8 ಆಗಸ್ಟ್ 2019, 19:45 IST
Last Updated 8 ಆಗಸ್ಟ್ 2019, 19:45 IST
ಧಾರವಾಡ ತಾಲ್ಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ತುಪ್ಪರಿಹಳ್ಳ ಸೃಷ್ಟಿಸಿದ ಪ್ರವಾಹದಿಂದಾಗಿ ಗಿಡಮರಗಳು ಧರೆಗುರುಳಿದ್ದು, ಅಕ್ಕಪಕ್ಕದ ಹೊಲಗಳು ಜಲಾವೃತಗೊಂಡಿವೆ
ಧಾರವಾಡ ತಾಲ್ಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ತುಪ್ಪರಿಹಳ್ಳ ಸೃಷ್ಟಿಸಿದ ಪ್ರವಾಹದಿಂದಾಗಿ ಗಿಡಮರಗಳು ಧರೆಗುರುಳಿದ್ದು, ಅಕ್ಕಪಕ್ಕದ ಹೊಲಗಳು ಜಲಾವೃತಗೊಂಡಿವೆ   

ಧಾರವಾಡ: ‘ರಾತ್ರಿ ನೀರು ಊರಾಗ ಹೊಕ್ಕೊ ಭಯ ಕಾಡಿತ್ರೀ. ಆದರೆ ಸೇತುವೆ ಒಡೆದು ಊರು ಉಳಿತ ನೋಡ್ರಿ...’

ಹೀಗೆಂದ ತಾಲ್ಲೂಕಿನ ಹಾರೋಬೆಳವಡಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು. ಜಿಲ್ಲೆಯಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಎಲ್ಲೆಲ್ಲೂ ನೀರು ತುಂಬಿದೆ. ಹಲವು ವರ್ಷಗಳಿಂದ ಬತ್ತಿಹೋಗಿದ್ದ ಹಳ್ಳಗಳು ಉಕ್ಕಿ ಹರಿಯುತ್ತಿವೆ. ತಾಲ್ಲೂಕಿನ ಹಾರೋಬೆಳವಡಿ ಬಳಿಯ ತುಪ್ಪರಿ ಹಳ್ಳ ಅಕ್ಕಪಕ್ಕದ ಹೊಲಗಳನ್ನೂ ಸೇರಿಸಿಕೊಂಡು ತನ್ನ ವ್ಯಾಪ್ತಿ ವಿಸ್ತರಿಸಿದೆ.

ರೌದ್ರಾವತಾರದಲ್ಲಿ ಧುಮ್ಮಿಕ್ಕುತ್ತಿರುವ ಹಳ್ಳ, ತನ್ನ ದಾರಿಗೆ ಅಡ್ಡಲಾಗುವ ಏನನ್ನೂ ಉಳಿಸಿಲ್ಲ. ಧಾರವಾಡದ ಹಾರೋಬಳವಡಿ ಹಾಗೂ ಬೆಳಗಾವಿ ಜಿಲ್ಲೆಯ ಇನಾಮಹೊಂಗಲ ನಡುವಿನ ಸೇತುವೆಯನ್ನೇ ಅಪ್ಪಳಿಸಿ, ಬೀಳಿಸಿದ ಹಳ್ಳ ಕೊಚ್ಚಿ ತೆಗೆದುಕೊಂಡು ಹೋಗಿದೆ. ಹಾರೋಬೆಳವಡಿಯ ಒಂದು ಭಾಗ ಹಾಗೂ ಇನಾಮಹೊಂಗಲದ ಒಂದಷ್ಟು ಭಾಗದ ಸೇತುವೆ ಕೊಚ್ಚಿಹೋಗಿದೆ. ನಡುವಿನ ಭಾಗ ಅವಶೇಷದಂತೆ ಹಾಗೇ ಉಳಿದು ಪ್ರವಾಹದ ಮೂಕಸಾಕ್ಷಿಯಂತೆ ನಿಂತಿದೆ.

ADVERTISEMENT

ಅಕ್ಕಪಕ್ಕದ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೆಸರು, ಉದ್ದು ನೀರುಪಾಲಾಗಿವೆ. ಹಳ್ಳದ ರಭಸಕ್ಕೆ ಹೊಳೆಕಲ್ಲುಗಳು ಒಂದು ಭಾಗದಿಂದ ರಸ್ತೆಯ ಮತ್ತೊಂದು ಭಾಗದ ಹೊಲದಲ್ಲಿ ಬಂದು ಬಿದ್ದಿವೆ. ರಸ್ತೆ ಪಕ್ಕದ ಗಿಡಗಳು ನೆಲಕ್ಕುರುಳಿವೆ. ಆಗೊಮ್ಮೆ ಈಗೊಮ್ಮೆ ಕಪ್ಪು ಡಾಂಬಾರು ರಸ್ತೆಯ ಇಷ್ಟಷ್ಟು ಕುಸಿದು ನೀರುಪಾಲಾಗುತ್ತಿರುವ ದೃಶ್ಯ ಕಂಡುಬಂತು.

‘1953ರಲ್ಲಿ ಇಂಥದ್ದೊಂದು ಪ್ರವಾಹವನ್ನು ನೋಡಿದ್ದೆ. ಊರನ್ನೇ ಮುಳುಗಿಸುವಂತ ಪ್ರವಾಹವದು. ಅದಾದ ನಂತರ 2009ರಲ್ಲಿ ಇಲ್ಲಿ ಹಳ್ಳ ಉಕ್ಕಿ ಊರೊಳಗೆ ಬಂದಿತ್ತಾದರೂ, ಈಪರಿಯ ರೌದ್ರಾವತಾರ ನೋಡಿರಲಿಲ್ಲ. ಹಳ್ಳ ಉಕ್ಕಿದ ಭೋರ್ಗರೆತ ನಡುರಾತ್ರಿ ನಿದ್ದೆ ಮಾಡಿಸಲಿಲ್ಲ’ ಎಂದು ಗ್ರಾಮದ ಬಸಣ್ಣಪ್ಪ ತುಪ್ಪರಿಹಳ್ಳ ಉಕ್ಕಿಹರಿದ ಪರಿಯನ್ನು ವಿವರಿಸಿದರು.

ಇವರಂತೆ ಇಡೀ ಗ್ರಾಮಸ್ಥರು ರಾತ್ರಿಯಿಂದ ಹಳ್ಳ ಕಾಯುತ್ತಿದ್ದಾರೆ. ಉಕ್ಕಿದರೆ ಇಡೀ ಊರೇ ಮುಳುಗುವ ಭೀತಿ ಎದುರಿಸುತ್ತಿದ್ದ ಗ್ರಾಮಸ್ಥರು ಹೇಳುವಂತೆ,‘ರಾತ್ರಿ 2ಕ್ಕೆ ಬಂದು ಒಮ್ಮೆ ನೋಡಿದಾಗ ಹಳ್ಳದಿಂದ ಸುಮಾರು 200 ಮೀಟರ್ ದೂರದಲ್ಲಿ ಹಳ್ಳ ಹರಿಯುತ್ತಿತ್ತು. ತಕ್ಷಣ ಮನೆಗೆ ಹೋಗಿ, ಸ್ಥಳಾಂತರಗೊಳ್ಳಲು ಸಿದ್ಧತೆ ಆರಂಭಿಸಿದೆವು. ಹಳ್ಳದ ಪರಿಸ್ಥಿತಿಯನ್ನು ಮನೆಯಲ್ಲೂ ವಿವರಿಸಿದೆವು. ದೇವರು ದೊಡ್ಡವನು, ಸೇತುವೆ ಕೊಚ್ಚಿಹೋಯಿತು. ಬೆಳಿಗ್ಗೆ 5ಕ್ಕೆ ಬಂದು ನೋಡುವ ಹೊತ್ತಿಗೆ ನೀರು ಇಳಿದಿತ್ತು. ಆದರೆ ಸವದತ್ತಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದಿತ್ತು’ ಎಂದರು.

2009ರಲ್ಲಿ ಕೆಶಿಪ್ ಮೂಲಕ ಧಾರವಾಡ ಸವದತ್ತಿ ರಸ್ತೆ ನಿರ್ಮಾಣಗೊಂಡಿತ್ತು. ಅದಕ್ಕೂ ಪೂರ್ವದಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು. ಸೇತುವೆ ಕುಸಿದಿದ್ದರಿಂದ ಈ ಮಾರ್ಗ ಬಂದ್ ಆಗಿದೆ. ಹೀಗಾಗಿ ಉಪ್ಪಿನಬೆಟಗೇರಿ ಮಾರ್ಗವಾಗಿ ಸವದತ್ತಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪ್ರವಾಹ ಉಕ್ಕಿ ಹರಿಯುತ್ತಿರುವುದರಿಂದ ಪೊಲೀಸರು ತುಸು ದೂರದಲ್ಲಿ ನಾಕಾಬಂದಿ ಹಾಕಿ ಜನರನ್ನು ಹಳ್ಳದತ್ತ ಹೋಗದಂತೆ ತಡೆಯುತ್ತಿದ್ದಾರೆ. ‘ಪ್ರಕೃತಿ ಮುಂದೆ ನಾವೆಲ್ಲರೂ ಸಣ್ಣವರು. ಅದರ ಕೋಪಕ್ಕೆ ನಾವು ತುತ್ತಾಗುವುದು ಬೇಡ. ದಯವಿಟ್ಟು ಅತ್ತ ಹೋಗಬೇಡಿ’ ಎಂದು ಕಾನ್‌ಸ್ಟೆಬಲ್ ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.