ADVERTISEMENT

ಉಳ್ಳಾಗಡ್ಡಿ ಬೆಲೆ ಕುಸಿತ; ದಿಢೀರ್ ಪ್ರತಿಭಟನೆ

ಚಿಗರಿ ಬಸ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ರೈತರು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 15:23 IST
Last Updated 4 ನವೆಂಬರ್ 2019, 15:23 IST
ಹುಬ್ಬಳ್ಳಿ ಅಮರಗೋಳ ಎಪಿಎಂಸಿ ಎದುರು ರೈತರು ಬಿಆರ್‌ಟಿಎಸ್‌ ವಾಹನಗಳನ್ನು ತಡೆದು ಪ್ರತಿಭಟನೆ ಮಾಡಿದ್ದರಿಂದ ಸಾಲುಗಟ್ಟಿ ನಿಂತಿರುವ ಚಿಗರಿ ವಾಹನಗಳು
ಹುಬ್ಬಳ್ಳಿ ಅಮರಗೋಳ ಎಪಿಎಂಸಿ ಎದುರು ರೈತರು ಬಿಆರ್‌ಟಿಎಸ್‌ ವಾಹನಗಳನ್ನು ತಡೆದು ಪ್ರತಿಭಟನೆ ಮಾಡಿದ್ದರಿಂದ ಸಾಲುಗಟ್ಟಿ ನಿಂತಿರುವ ಚಿಗರಿ ವಾಹನಗಳು   

ಹುಬ್ಬಳ್ಳಿ: ನಗರದ ಅಮರಗೋಳ ಕೃಷಿ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ದರ ಏಕಾಏಕಿ ಕುಸಿದಿರುವುದನ್ನು ಖಂಡಿಸಿ ಸೋಮವಾರ ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ ಭಾಗಗಳಿಂದ ಬಂದ ನೂರಾರು ರೈತರು ಎಪಿಎಂಸಿ ಎದುರು ಅರ್ಧ ಗಂಟೆಗೂ ಹೆಚ್ಚುಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

‘ಶನಿವಾರ ಉಳ್ಳಾಗಡ್ಡಿ ದರ ಕ್ವಿಂಟಲ್‌ಗೆ ₹5,500 ರಿಂದ ₹6,000 ಇದ್ದಿದ್ದು, ಸೋಮವಾರ ದಿಢೀರ್ ₹2,300ಕ್ಕೆ ಕುಸಿದಿದೆ. ಎಪಿಎಂಸಿ ವರ್ತಕರು ತಮ್ಮ ಲಾಭಕ್ಕೋಸ್ಕರ ರೈತರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ' ಎಂದು ಆರೋಪಿಸಿ ಹುಬ್ಬಳ್ಳಿ–ಧಾರವಾಡ ಮಧ್ಯ ಸಂಚರಿಸುವ ಬಿಆರ್‌ಟಿಎಸ್‌ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.

‘ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ. ಪ್ರತಿಭಟನೆ ಹಿಂಪಡೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ’ ಡಿಸಿಪಿ ಶಂಕರ ರಾಗಿ ವಿನಂತಿಸಿದರು. ‘ನಿಮ್ಮ ಮೇಲೆ ಭರವಸೆ ಇಲ್ಲ’ ಎಂದು ರೈತರು ಅಲ್ಲಿಯೇ ಧರಣಿ ಕುಳಿತರು.

ADVERTISEMENT

ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಗೌಡರ ಅವರು, ವರ್ತಕರ ಜೊತೆ ಸಭೆ ನಡೆಸಿ ಅನ್ಯಾಯ ಸರಿಪಡಿಸುತ್ತೇನೆ ಎಂದು ರೈತರ ಮನವೊಲಿಸಿ, ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಕಚೇರಿಗೆ ಕರೆದುಕೊಂಡು ಹೋದರು.

ಸಭೆಯಲ್ಲಿ ಮೊರಬದ ರೈತ ವಿರೂಪಾಕ್ಷ ಕೊಟಬಾಗಿ ಮಾತನಾಡಿ, ‘ಹೈದರಾಬಾದ್ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಕ್ವಿಂಟಲ್‌ಗೆ ₹6,000 ಇದೆ. ಇಲ್ಲಿ ಯಾಕೆ ಕಡಿಮೆ? ಶನಿವಾರ ₹5,000 ಇತ್ತು. ಇವತ್ತು ದಿಢೀರ್ ಬೆಲೆ ಕುಸಿದಿದೆ. ರೈತರ ಬೆವರ ಹನಿಯಲ್ಲಿ ವರ್ತಕರು ಮತ್ತು ಅಧಿಕಾರಿಗಳು ಐಷಾರಾಮಿ ಜೀವನ ನಡೆಸುವುದು ಬಿಟ್ಟರೆ ನಮಗೆ ನ್ಯಾಯ ದೊರೆಯುತ್ತದೆ’ ಎಂದರು.

ಜಗನ್ನಾಥ ಗೌಡರ ಮಾತನಾಡಿ, ‘ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ. ಗುಣಮಟ್ಟದ ಉಳ್ಳಾಗಡ್ಡಿಗೆ ನ್ಯಾಯ ಸಮ್ಮತ ಬೆಲೆ ನೀಡುವಂತೆ ವರ್ತಕರ ಸಂಘಕ್ಕೆ ತಿಳಿಸುತ್ತೇನೆ’ ಎಂದರು.

ಉಳ್ಳಾಗಡ್ಡಿ ವರ್ತಕರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ, ‘ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಟೆಂಡರ್ ಕರೆದಿಲ್ಲ. ದರ ನಿಗದಿ ಪಡಿಸುವ ಪೂರ್ವವೇ ಪ್ರತಿಭಟನೆ ನಡೆಸುತ್ತಿದ್ದೀರಿ. ನೀವು ತಂದ ಉಳ್ಳಾಗಡ್ಡಿಗೆ ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ದೊರೆಯಲಿದೆ’ ಎಂದು ಭರವಸೆ ನೀಡಿದರು. ಆಗ ರೈತರು ಪ್ರತಿಭಟನೆ ಹಿಂಪಡೆದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.