ADVERTISEMENT

ಶಾಂತಿಸಾಗರ ಆಚಾರ್ಯರ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 14:45 IST
Last Updated 8 ಸೆಪ್ಟೆಂಬರ್ 2021, 14:45 IST
ಹುಬ್ಬಳ್ಳಿಯಲ್ಲಿ ಬುಧವಾರ ಆಚಾರ್ಯ ಶಾಂತಿಸಾಗರ ಮಹಾರಾಜರ 66ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ಹುಬ್ಬಳ್ಳಿಯಲ್ಲಿ ಬುಧವಾರ ಆಚಾರ್ಯ ಶಾಂತಿಸಾಗರ ಮಹಾರಾಜರ 66ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು   

ಹುಬ್ಬಳ್ಳಿ: ದಿಗಂಬರ ಮುನಿ ಧರ್ಮದ 20ನೇ ಶತಮಾನದ ಪ್ರಥಮ ಆಚಾರ್ಯರಾಗಿ ದೇಶದುದ್ದಕ್ಕೂ ಸಮುದಾಯದ ಪರಂಪರೆಗೆ ಪುನರ್ಜನ್ಮ ನೀಡಿದ ಚಕ್ರವರ್ತಿ ಆಚಾರ್ಯ ಶಾಂತಿಸಾಗರ ಮಹಾರಾಜರ 66ನೇ ಪುಣ್ಯಸ್ಮರಣೆಯನ್ನು ನಗರದ ದಿಗಂಬರ ಜೈನ ಸಮಾಜದ ವತಿಯಿಂದ ಬುಧವಾರ ಆಚರಿಸಲಾಯಿತು.

ಬೆಳಿಗ್ಗೆ ಶಾಂತಿನಾಥ ಜಿನರಿಗೆ ವಿಶೇಷ ಅಭಿಷೇಕ ನೆರವೇರಿಸಿದ ನಂತರ ಶ್ರಾವಕಿ ಸರೋಜಾ ಗುಗ್ಗರಿ ಅವರು ದೀಪ ಹಚ್ಚಿ ಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಂತಿಸಾಗರ ಅಷ್ಟಕ, ಅರ್ಘ್ಯ, ಆರತಿ, ಪುಷ್ಪ ನಮನ ನಡೆಯಿತು.

ಬಳಿಕ ಮಾತನಾಡಿದ ಸಮಾಜದ ಹಲವು ಮುಖಂಡರು ‘ಬ್ರಿಟಿಷ್‌ ಆಳ್ವಿಕೆಯ ಕಠಿಣ ವಾತಾವರಣದಲ್ಲಿ ದಿಗಂಬರ ಸಂತನಾಗಿ ಭಗವಾನ್ ಮಹಾವೀರರ ಅಹಿಂಸೆ, ಸತ್ಯ, ಔದಾರ್ಯ,ಅಪರಿಗ್ರಹ ಹಾಗು ಬ್ರಹ್ಮಚರ್ಯಗಳೆಂಬ ಪಂಚ ಮಹಾವ್ರತಗಳನ್ನು ಸ್ವ ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಜನರಿಗೆ ತಲುಪಿಸಲು ಶಾಂತಿಸಾಗರ ಆಚಾರ್ಯರು ಶ್ರಮಿಸಿದರು’ ಎಂದರು.

ADVERTISEMENT

‘ಸಮಾಜವನ್ನು ಆವರಿಸಿದ್ದ ಕಂದಾಚಾರಗಳನ್ನು ದೂರ ಮಾಡಲು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 18 ಸುತ್ತು ಪದವಿಹಾರ ನಡೆಸಿ ಒಟ್ಟು 57,000 ಕಿ.ಮೀ. ಕ್ರಮಿಸಿ ಜನರನ್ನು ಪ್ರಭಾವಿತಗೊಳಿಸಿದರು. 27 ವರ್ಷಗಳ ಕಾಲ ಒಂದು ಉಪವಾಸ ಕೈಗೊಂಡಿದ್ದರು. ತಮ ಕಠಿಣ ಆಚರಣೆ, ಶಾಸ್ತ್ರೋಕ್ತ ಜೀವನ ಪದ್ಧತಿಗಳಿಂದ ಚಾರಿತ್ರದ ಅಧಿಪತಿ ಎನಿಸಿದರು’ ಎಂದರು.

ದಿಗಂಬರ ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ಶಾಂತಿನಾಥ ಹೋತಪೇಟಿ, ಬ್ರಹ್ಮಕುಮಾರ ಬೀಳಗಿ, ಮಹಾವೀರ ಗೊಂಗಡಿ, ಮನ್ಮಥ ಕ್ಯಾಸಾ, ಅಜಯ ಬೀಳಗಿ, ಅಜಿತ ಮಾಲಗತ್ತಿ, ಪಾರ್ಶ್ವನಾಥ ರೋಖಡೆ, ಗುಲಾಬ ಪ್ರಥಮಶೆಟ್ಟಿ, ಶರ್ಮಿಳಾ ಮಾಲಗತ್ತಿ, ಶ್ರಾವಕಿ ಪ್ರಥಮಶೆಟ್ಟಿ, ಬಾಹುಬಲಿ ಜಿರಾಳೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.