ADVERTISEMENT

ಗ್ರಾಹಕ ಸ್ನೇಹಿ ಸೌಲಭ್ಯಕ್ಕೆ ಬದ್ಧ

ಉತ್ತರ ಕರ್ನಾಟಕದಲ್ಲಿ ಫಿನೊ ಪೇಮೆಂಟ್ಸ್ ಬ್ಯಾಂಕ್‌: ಹಿಮಾಂಶು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 12:33 IST
Last Updated 4 ಜುಲೈ 2019, 12:33 IST
ಹುಬ್ಬಳ್ಳಿಯಲ್ಲಿ ಗುರುವಾರ ಫಿನೊ ಪೇಮೆಂಟ್ಸ್‌ ಬ್ಯಾಂಕ್‌ನ ಕೇಂದ್ರ ಮತ್ತು ಪಶ್ಚಿಮ ವಿಭಾಗದ ಹಿರಿಯ ಮುಖ್ಯಸ್ಥ ಹಿಮಾಂಶು ಮಿಶ್ರಾ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಗುರುವಾರ ಫಿನೊ ಪೇಮೆಂಟ್ಸ್‌ ಬ್ಯಾಂಕ್‌ನ ಕೇಂದ್ರ ಮತ್ತು ಪಶ್ಚಿಮ ವಿಭಾಗದ ಹಿರಿಯ ಮುಖ್ಯಸ್ಥ ಹಿಮಾಂಶು ಮಿಶ್ರಾ ಮಾತನಾಡಿದರು   

ಹುಬ್ಬಳ್ಳಿ: ಸುಲಭವಾಗಿ ವಹಿವಾಟು ನಡೆಸಲು ಕರ್ನಾಟಕದಲ್ಲಿ ಒಟ್ಟು 4,500ಕ್ಕೂ ಹೆಚ್ಚು ಫಿನೊ ಪೇಮೆಂಟ್ಸ್‌ ಬ್ಯಾಂಕ್‌ ವ್ಯವಹಾರ ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಿದ್ದೇವೆ ಎಂದು ಬ್ಯಾಂಕ್‌ನ ಕೇಂದ್ರ ಮತ್ತು ಪಶ್ಚಿಮ ವಿಭಾಗದ ಹಿರಿಯ ಮುಖ್ಯಸ್ಥ ಹಿಮಾಂಶು ಮಿಶ್ರಾ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಫಿನೊ ಬ್ಯಾಂಕ್‌ ಕರ್ನಾಟಕದಲ್ಲಿ ಈಗ ನಾಲ್ಕು ಶಾಖೆ, 350 ಬಿಪಿಸಿಎಲ್‌ ಔಟ್‌ಲೇಟ್ ಮತ್ತು 2,056 ವ್ಯವಹಾರ ಕೇಂದ್ರಗಳನ್ನು ಹೊಂದಿದೆ. ಇದನ್ನು 4,500ಕ್ಕೆ ಹೆಚ್ಚಿಸುವ ಉದ್ದೇಶ ನಮ್ಮದು. ಕಿರಾಣಿ ಅಂಗಡಿ, ಮೊಬೈಲ್‌ ರಿಪೇರಿ ಅಂಗಡಿ, ಸ್ಟೇಷನರಿ ಅಂಗಡಿಗಳಲ್ಲಿ ಗ್ರಾಹಕ ಕೇಂದ್ರಗಳನ್ನು ಆರಂಭಿಸಲಾಗುವುದು. ಫಿನೊ ಮೂಲಕ ಹೊಸ ಖಾತೆ ಆರಂಭಿಸುವುದು, ಹಣ ವರ್ಗಾವಣೆ, ಹಣ ತೆಗೆಯುವುದು, ವಿದ್ಯುತ್‌ ಬಿಲ್‌ ಪಾವತಿಸುವುದು ಸುಲಭ. ಇದು ಡಿಜಿಟಲ್‌ ವಹಿವಾಟಿಗೆ ನೆರವಾಗುತ್ತದೆ. ಸಣ್ಣ ವ್ಯವಹಾರಗಳ ಮಾಲೀಕರು ಇದರಿಂದ ಲಾಭ ಕೂಡ ಗಳಿಸಬಹುದು’ ಎಂದರು.

‘ರೈತರು, ತರಕಾರಿ ಮಾರಾಟಗಾರರು, ಸ್ವಯಂ ಉದ್ಯೋಗಿಗಳು ವಾರ್ಷಿಕವಾಗಿ ₹ 1ರಿಂದ ₹ 6 ಲಕ್ಷದ ತನಕ ಗಳಿಸುವ ಗ್ರಾಹಕರಿಗೆ ಫಿನೊ ಸೇವೆ ಲಭ್ಯವಾಗುತ್ತದೆ. ನರೇಗಾ, ಎಲ್‌ಪಿಜಿ ಸಬ್ಸಿಡಿಯನ್ನು ಕೂಡ ಇದರ ಮೂಲಕ ಪಡೆದುಕೊಳ್ಳಬಹುದು. ಜನರಿಗೆ ಸುಲಭವಾಗಿ ಬ್ಯಾಂಕಿಂಗ್‌ ಸೌಲಭ್ಯ ತಲುಪಿಸುವುದು ನಮ್ಮ ಗುರಿ’ ಎಂದು ತಿಳಿಸಿದರು.

ADVERTISEMENT

‘ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಜನರನ್ನು ತಲುಪಲು ಗಲ್ಲಿ ಗಲ್ಲಿ ಫಿನೊ ಯೋಜನೆ ಆರಂಭಿಸಿದ್ದು, ಧಾರವಾಡ, ಬೆಳಗಾವಿ, ಕಲಬುರ್ಗಿ, ವಿಜಯಪುರದಲ್ಲಿ ಹೆಚ್ಚು ವ್ಯವಹಾರ ಕೇಂದ್ರಗಳನ್ನು ಆರಂಭಿಸಲಾಗುವುದು. ಔಟ್‌ಲೇಟ್‌ಗಳು ಹೆಚ್ಚು ಹೊತ್ತು ತೆಗೆಯುವ ಕಾರಣ ಗ್ರಾಹಕರು ಸುಲಭವಾಗಿ ವಹಿವಾಟು ನಡೆಸಬಹುದು. ರಜಾದಿನಗಳಲ್ಲಿಯೂ ಫಿನೊ ಮೂಲಕ ಬ್ಯಾಂಕಿಂಗ್‌ ವ್ಯವಹಾರ ಮಾಡಬಹುದು. ಆಧಾರ್‌ ದೃಢೀಕರಣ ಮಾಡಿದರೆ ಸುಲಭವಾಗಿ ನಿಮ್ಮ ಖಾತೆಯಿಂದ ಹಣ ‍ಪಡೆಯಬಹುದು’ ಎಂದು ಹಿಮಾಂಶು ವಿವರಿಸಿದರು.

ಬ್ಯಾಂಕ್‌ನ ವಲಯದ ಮುಖ್ಯಸ್ಥ ಜಿಜ್ಞೇನ್‌ ಜುಟಾನ್‌, ವಿಭಾಗೀಯ ಮುಖ್ಯಸ್ಥ ಅಬ್ದುಲ್ ಹರ್ವಾನ್‌, ಕ್ಲಸ್ಟರ್‌ ಅಧಿಕಾರಿಗಳಾದ ಸುರೇಶ ರಾಠೋಡ, ಅನಿಲ್‌ ಪವಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.