ADVERTISEMENT

ಎಸ್‌ಟಿಗೆ ಶೇ 7.5 ಮೀಸಲಾತಿ ಬೇಡಿಕೆಗೆ ಬದ್ಧ

ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 8:10 IST
Last Updated 6 ಅಕ್ಟೋಬರ್ 2020, 8:10 IST

ಹುಬ್ಬಳ್ಳಿ: ‘ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ನೀಡಬೇಕೆಂಬ ಬೇಡಿಕೆಗೆ ಈಗಲೂ ಬದ್ಧ. ಬಿಜೆಪಿ ಬೆಂಬಲಿಸುವ ಪ್ರಮುಖ ಸಮುದಾಯಗಳ ಪೈಕಿ, ಎಸ್‌ಟಿಯೂ ಒಂದು. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ’ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ ಹೇಳಿದರು.

‘ಮೀಸಲಾತಿ ಹೆಚ್ಚಿಸಲು ಸಮುದಾಯದ ಶಾಸಕರು, ಮುಖಂಡರು ಹಾಗೂ ಸ್ವಾಮೀಜಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗವೂ ವರದಿ ನೀಡಿದೆ’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌

‘ಕುರುಬರು ಹಾಗೂ ಗಂಗಾಮತಸ್ಥರನ್ನು ಎಸ್‌ಟಿಗೆ ಸೇರಿಸಲು ನಮ್ಮ ವಿರೋಧವಿಲ್ಲ. ಆದರೆ, ಅದಕ್ಕೂ ಮುಂಚೆ ಮೀಸಲಾತಿಯನ್ನು ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸಬೇಕು. ಎರಡೂ ಸಮುದಾಯಗಳನ್ನು ಎಸ್‌ಟಿಗೆ ಸೇರಿಸಿದ ಬಳಿಕ, ಈ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಏರಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಡಿ.ಕೆ. ಶಿವಕುಮಾರ್ ಅವರು ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ, ಸಿಬಿಐ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅದೇ ರೀತಿ, ಡಿಕೆಶಿ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲೇ ಬೇಕು. ದಾಳಿ ರಾಜಕೀಯಪ್ರೇರಿತ ಎಂಬ ಕಾಂಗ್ರೆಸ್ ಆರೋಪ ಕುಂಬಳಕಾಯಿ ಕಳ್ಳ ಅಂದ್ರೆ, ಹೆಗಲು ಮುಟ್ಟಿ ನೋಡಿಕೊಂಡಂತಿದೆ’ ಎಂದು ವ್ಯಂಗ್ಯವಾಡಿದರು.

‘ಮುಂಬರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ.ಟಿಕೆಟ್‌ಗೆ ಸಂಬಂಧಿಸಿದಂತೆ, ಮೂಲ ಬಿಜೆಪಿಗರಲ್ಲಿ ಅಸಮಾಧಾನ ಇದ್ದಿದ್ದು ನಿಜ. ಈಗ ಎಲ್ಲವೂ ಸರಿ ಹೋಗಿದ್ದು,ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಾಗಿ ಗೆಲ್ಲಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಕಠಿಣ ಶಿಕ್ಷೆಯಾಗಲಿ:

‘ಉತ್ತರಪ್ರದೇಶದ ಹಾಥರಸ್‌ನ ಪರಿಶಿಷ್ಟ ಜಾತಿ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಕೆಲ ಅಧಿಕಾರಿಗಳನ್ನು ಅಮಾನತು ಕೂಡ ಮಾಡಿ, ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ’ ಎಂದರು.

‘ಮತ್ತೊಮ್ಮೆ ಜಾತಿ ಸಮೀಕ್ಷೆಯಾಗಲಿ’

ಜಾತಿ ಗಣತಿ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಿಪ್ಪರಾಜು, ‘ಸಿದ್ದರಾಮಯ್ಯ ಸರ್ಕಾರ ಜಾತಿ ಗಣತಿ ಮಾಡಿ, ಅದನ್ನು ಜಾರಿ ಮಾಡದೆ ಸುಮ್ಮನಾಯಿತು. ಅದರಲ್ಲಿ ಏನಿದೆಯೋ ಗೊತ್ತಿಲ್ಲ. ಹಾಗಾಗಿ, ಮತ್ತೊಮ್ಮೆ ನಿಖರವಾಗಿ ಸಮೀಕ್ಷೆಯಾದರೆ ಒಳ್ಳೆಯದು’ ಎಂದರು.

‘ನಿಮ್ಮ ಸರ್ಕಾರದ ಸಚಿವ ಕೆ.ಎಸ್. ಈಶ್ವರಪ್ಪ ಅವರು, ವರದಿ ಜಾರಿಗಾಗಿ ಹಿಂದುಳಿದ ವರ್ಗಗಳ ಮುಖಂಡ ನೇತೃತ್ವದಲ್ಲಿ ಸಭೆ ನಡೆಸಿದ್ದಾರಲ್ಲ?’ ಎಂದು ಪ್ರಶ್ನಿಸಿದ್ದಕ್ಕೆ, ‘ಆ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ’ ಎಂದು ಜಾರಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.