ADVERTISEMENT

ನೌಕರರ ಬೇಡಿಕೆ ಪರಿಶೀಲಿಸಲು ಸಮಿತಿ‘ ಸವದಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 15:36 IST
Last Updated 5 ನವೆಂಬರ್ 2019, 15:36 IST

ಹುಬ್ಬಳ್ಳಿ: ರಾಜ್ಯದಲ್ಲಿರುವ 1.30 ಲಕ್ಷ ನಿರ್ವಾಹಕರು ಹಾಗೂ ಚಾಲಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆನ್ನುವ ನೌಕರರ ಬೇಡಿಕೆಯ ಸಾಧಕ, ಬಾಧಕಗಳ ಬಗ್ಗೆ ಚರ್ಚಿಸಲು ಸಮಿತಿ ರಚಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ರಾಜ್ಯದ ಎಲ್ಲ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಅಪೇಕ್ಷೆ ಸರ್ಕಾರಕ್ಕೂ ಇದೆ’ ಎಂದರು.

‘ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಸ್‌ ಬೇ ಮಾಡಲಾಗುವುದು. ಇದಕ್ಕಾಗಿ 18 ಕಿ.ಮೀ ರಸ್ತೆ ಗುರುತಿಸಲಾಗಿದೆ. ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆ ಬಳಕೆ ಪ್ರೋತ್ಸಾಹಿಸುವ ಉದ್ದೇಶ ನಮ್ಮದು’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಮಾಲಿನ್ಯ ಕಡಿಮೆ ಮಾಡಲು ಎಲೆಕ್ಟ್ರಾನಿಕ್‌ ಬಸ್‌ಗಳ ಸಂಚಾರ ಆರಂಭಿಸಲಾಗುವುದು. ಇದಕ್ಕಾಗಿ ನೂರು ಬಸ್‌ಗಳನ್ನು ಖರೀದಿಸಲಾಗುತ್ತದೆ. ಹೂಡಿಕೆ ಹಾಗೂ ನಿರ್ವಹಣೆ ಮಾಡಲು ವಿದೇಶಿ ಕಂಪನಿಗಳು ಮುಂದೆ ಬಂದಿವೆ. ಅಸ್ಸಾಂ, ಹರಿಯಾಣ, ಪಂಜಾಬ್‌, ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಆಯಾ ರಾಜ್ಯಗಳಿಂದ ಸಿಬ್ಬಂದಿ ಹಾಗೂ ರಸ್ತೆಯನ್ನು ಮಾತ್ರ ಒದಗಿಸಲಾಗುತ್ತದೆ. ಬಸ್‌ಗಳ ನಿರ್ವಹಣೆ, ಬಸ್‌ ಖರೀದಿಗೆ ಹೂಡಿಕೆ ಎಲ್ಲವೂ ವಿದೇಶಿ ಕಂಪನಿಗಳೇ ಮಾಡಲಿದೆ. ರಾಜ್ಯ ಸರ್ಕಾರ ಶೇ 60ರಷ್ಟು ಮತ್ತು ಕಂಪನಿ ಶೇ 40ರಷ್ಟು ಪಾಲು ಪಡೆಯುತ್ತವೆ. ಕರ್ನಾಟಕದಲ್ಲಿಯೂ ಇದೇ ರೀತಿ ಮಾಡುವ ಚಿಂತನೆಯಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.