ADVERTISEMENT

‘ಕುಶಲಕರ್ಮಿಗಳಿಗೆ ಏಕಾಗ್ರತೆ, ಸಮನ್ವಯತೆ ಮುಖ್ಯ’

​ಪ್ರಜಾವಾಣಿ ವಾರ್ತೆ
Published 4 ಮೇ 2025, 15:39 IST
Last Updated 4 ಮೇ 2025, 15:39 IST
ಧಾರವಾಡದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಏರ್ಪಡಿಸಿದ್ದ ಉಪನ್ಯಾಸದಲ್ಲಿ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು
ಧಾರವಾಡದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಏರ್ಪಡಿಸಿದ್ದ ಉಪನ್ಯಾಸದಲ್ಲಿ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು   

ಧಾರವಾಡ: ‘ಕುಶಲಕರ್ಮಿಗಳಿಗೆ ಏಕಾಗ್ರತೆ ಹಾಗೂ ಸಮನ್ವಯತೆ ಮುಖ್ಯ’ ಎಂದು ಸಾಹಿತಿ ರೆಹಮತ್ ತರೀಕೆರೆ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ದೇವರ ದಾಸಿಮಯ್ಯ ಜಯಂತ್ಯುತ್ಸವ ದತ್ತಿ ಅಂಗವಾಗಿ ಈಚೆಗೆ ಆಯೋಜಿಸಿದ್ದ ಉಪನ್ಯಾಸದಲ್ಲಿ ‘ನೇಕಾರ ಸಂಸ್ಕೃತಿ ಹಾಗೂ ಧರ್ಮ’ (ದಾಸಿಮಯ್ಯ, ಕಬೀರ ಹಾಗೂ ಭೀಮಾಂಬಿಕೆ) ಕುರಿತು ಮಾತನಾಡಿದರು.

‘ಕಲ್ಯಾಣ ಪಟ್ಟಣದಲ್ಲಿ ಸಾಮಾನ್ಯ ವ್ಯಕ್ತಿಗಳು ಗುರುದೀಕ್ಷೆ ಪಡೆದು ಅಸಮಾನ್ಯ ಸಾಧಕರಾಗಿ ಬೆಳೆದರು. ಕಲ್ಯಾಣ ಪಟ್ಟಣವು ಒಂದು ರೀತಿ ಕುಶಲಕರ್ಮಿಗಳ ಕೇಂದ್ರವಾಗಿತ್ತು. ಕುಶಲಕರ್ಮಿಗಳಲ್ಲಿ ಕಾಯಕ ನಿಷ್ಠೆ ಇತ್ತು. ತಮ್ಮ ಕಾಯಕದೊಂದಿಗೆ ವೃತ್ತಿಧರ್ಮವನ್ನು ಕಾಪಾಡಿಕೊಂಡು ಬಂದರು’ ಎಂದರು.

ADVERTISEMENT

‘ಕುಶಲಕರ್ಮಿಗಳು ಬಸವಣ್ಣನವರಿಗೆ ಘನತೆ ತಂದುಕೊಟ್ಟರು. ನೇಕಾರಿಕೆಯಂತಹ ವೃತ್ತಿಯಲ್ಲಿ ಸಮನ್ವಯತೆ ಬಹಳ ಮುಖ್ಯ. ಸಾಮರಸ್ಯದಿಂದ ಮಾತ್ರ ಗುಣಮಟ್ಟದ ವಸ್ತುಗಳು ಉತ್ಪಾದನೆ ಮಾಡಲು ಸಾಧ್ಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕಿ ಶಾಂತಾ ಇಮ್ರಾಪೂರ ಮಾತನಾಡಿ, ‘ದೇವರ ದಾಸಿಮಯ್ಯ ಶರಣ ಸಂಸ್ಕೃತಿಯಲ್ಲಿ ಮುಂದಿನ ವಚನಕಾರರಿಗೆ ವೈಚಾರಿಕತೆಯ ಬೀಜ ಬಿತ್ತಿದರು. ಅವರ ಚಿಂತನೆಗಳು ಸಮಾಜದಲ್ಲಿ ಸಮಾನತೆ, ಕಾಯಕ ನಿಷ್ಠೆ, ಕಲ್ಪನೆಯನ್ನು ತಂದುಕೊಟ್ಟವು. ವಚನ ಚಳವಳಿಗೆ ತಾತ್ವಿಕ ನೆಲೆಗಟ್ಟು ತಂದು ಕೊಟ್ಟವರೇ ದೇವರ ದಾಸಿಮಯ್ಯ’ ಎಂದು ಹೇಳಿದರು.

ರಾಮಚಂದ್ರ ಗೆದ್ದೆಣ್ಣವರ, ಸತೀಶ ತುರಮರಿ, ಶಂಕರ ಹಲಗತ್ತಿ, ವೀರಣ್ಣ ಒಡ್ಡೀನ, ಜಿನದತ್ತ ಹಡಗಲಿ, ಬಸವಪ್ರಭು ಹೊಸಕೇರಿ, ಧನವಂತ ಹಾಜವಗೋಳ, ಪ್ರೊ. ಐ.ಜಿ. ಸನದಿ, ನಿಂಗಣ್ಣಕುಂಟಿ, ಸುರೇಶ ಭಂಡಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.