ADVERTISEMENT

ಸಿಎಸ್‌ಆರ್‌ನಡಿ 200 ಶಾಲಾ ಕೊಠಡಿ ನಿರ್ಮಾಣ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಅಧಿಕಾರಿಗಳೊಂದಿಗೆ ವರ್ಚ್ಯೂವಲ್‌ ಸಭೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:18 IST
Last Updated 22 ಜುಲೈ 2022, 5:18 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ಶಾಲಾ ಕೊಠಡಿಗಳ ದುರಸ್ತಿಗೆ ಆದ್ಯತೆ ನೀಡಲಾಗುವುದು. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಹೊಸದಾಗಿ 200 ಶಾಲಾ ಕೊಠಡಿಗಳನ್ನು ನಿರ್ಮಾಣ ‌‌ಮಾಡಲಾಗುವುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಗುರುವಾರ ನವದೆಹಲಿ ಕಚೇರಿಯಿಂದ ಧಾರವಾಡದ ಜಿಲ್ಲಾಡಳಿತದೊಂದಿಗೆ ವರ್ಚ್ಯೂವಲ್‌ ಸಭೆ ನಡೆಸಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದಿಂದ 240 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ವಿಶೇಷ ಅನುದಾನ ಬಂದಿದೆ. ವೇದಾಂತ ಕಂಪನಿಯು ಸಿಎಸ್‌ಆರ್‌ನಡಿ 100 ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಲಾಗುತ್ತಿದೆ. ಜಲಜೀವನ ಮಿಷನ್ ಯೋಜನೆಯಡಿ, ಜಿಲ್ಲೆಯ ಎಲ್ಲಾ ಗ್ರಾಮಗಳ ಮನೆಗಳಿಗೆ ನಲ್ಲಿ ನೀರು ಪೂರೈಸುವ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಕಾಮಗಾರಿ ಮುಗಿದ ನಂತರ ಗ್ರಾಮಗಳಲ್ಲಿ ಜಲೋತ್ಸವ ಕಾರ್ಯಕ್ರಮ ಆಯೋಜಿಸಲು ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ 100ಅಂಗನವಾಡಿಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಇವುಗಳನ್ನು ನಂದ ಘರ್ ಮಾಡುವ ಉದ್ದೇಶ ಹೊಂದಲಾಗಿದೆ. ಕಟ್ಟಡ ಕೆಲಸ ಪ್ರಗತಿಯಲ್ಲಿದ್ದು, ಮೂರು ತಿಂಗಳೊಳಗಾಗಿ ಕೆಲಸ ಪೂರ್ಣಗೊಳ್ಳಲಿದೆ. ಈಗಾಗಲೇ ವೇದಾಂತ ಕಂಪನಿಯ ಸಿಇಒ ಅನಿಲ್ ಅಗರವಾಲ್ ಅವರೊಂದಿಗೆ ಚರ್ಚಿಸಲಾಗಿದ್ದು, ಜಿಲ್ಲೆಯಲ್ಲಿ 200 ನಂದಘರ್ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ’ ಎಂದರು.

ADVERTISEMENT

‘ಕೆರೆಗಳನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲೂ ಕೆರೆಗಳನ್ನು ಅಭಿವೃದ್ಧಿಪಡಿಸಿಸಬೇಕು. ಸರೋವರಗಳ ಆವರಣವನ್ನು ಸ್ವಚ್ಛಗೊಳಿಸಿ, ರಾಷ್ಟ್ರ ಧ್ವಜಸ್ತಂಭ ಸ್ಥಾಪಿಸಿ ಆಗಸ್ಟ್‌ 15ರಂದು ಧ್ವಜಾರೋಹಣಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಗರದಲ್ಲಿ 24x7 ಕುಡಿಯುವ ನೀರು ಪೂರೈಕೆಯಲ್ಲಿ ಆಗಿರುವ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಬೇಕು. ಕೋರ್ಟ್ ಮೆಟ್ಟಿಲೇರಿರುವ ಸಮಸ್ಯೆಯನ್ನು ಬಗೆಹರಿಸಲು ಉತ್ತಮ ವಕೀಲರನ್ನು ನೇಮಿಸಬೇಕು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ, ಕೇಂದ್ರ ಸರ್ಕಾರ ರೂಪಿಸಿರುವ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ (ಹರ್ ಘರ್ ತಿರಂಗ) ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್‍ ಆರ್., ಧಾರವಾಡ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.