ಧಾರವಾಡ: ವಿಮಾದಾರಗೆ ವಾಹನ ರಿಪೇರಿ ಬಿಲ್ ಪಾವತಿಸಲು ನಿರಾಕರಿಸಿದ ಪ್ರಕರಣದಲ್ಲಿ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಕೋರ್ಟ್ ದಂಡ ವಿಧಿಸಿದೆ. ವಾಹನ ರಿಪೇರಿ ಹಣವನ್ನು ಬಡ್ಡಿಸಮೇತ ಸಂದಾಯ ಮಾಡಲು ಆದೇಶಿಸಿದೆ.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಈ ಆದೇಶ ನೀಡಿದ್ದಾರೆ. ₹50 ಸಾವಿರ ಪರಿಹಾರ, ಪ್ರಕರಣದ ವೆಚ್ಚ ₹10 ಸಾವಿರ ಹಾಗೂ ವಾಹನ ರಿಪೇರಿ ವೆಚ್ಚವನ್ನು ವಿಮಾದಾರಗೆ ಪಾವತಿಸಲು ಆದೇಶಿಸಿದ್ದಾರೆ.
ಏನಿದು ಪ್ರಕರಣ?: ಕಲಘಟಗಿ ತಾಲ್ಲೂಕಿನ ಆಲದಕಟ್ಟಿಯ ಫಕೀರಪ್ಪ ಹರಿಜನ ಅವರು 2020ರಲ್ಲಿ ಟಾಟಾ ಟ್ರಕ್ ಖರೀದಿಸಿ, ವಾಹನ ವಿಮೆ ಮಾಡಿಸಿದ್ದರು.
ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿಯಲ್ಲಿಅಪಘಾತ ಸಂಭವಿಸಿ ಟ್ರಕ್ ಜಖಂಗೊಂಡಿತ್ತು. ಹುಬ್ಬಳ್ಳಿಯ ಮಾನಿಕಬಾಗ್ ಆಟೊಮೊಬೈಲ್ಸ್‌ನಲ್ಲಿ ಟ್ರಕ್ ರಿಪೇರಿಗೆ ₹10.02 ಲಕ್ಷ ಪಾವತಿಸಲು ತಿಳಿಸಿದ್ದರು. ವಿಮಾ ಕಂಪನಿಯ ಸಮೀಕ್ಷೆದಾರ ವಾಹನ ರಿಪೇರಿ ವೆಚ್ಚ ₹8.47 ಲಕ್ಷ ಎಂದು ವರದಿ ನೀಡಿದ್ದರು.
ರಿಪೇರಿ ಹಣ ಪಾವತಿಸುವಂತೆ ಫಕೀರಪ್ಪ ವಿಮಾ ಕಂಪನಿಗೆ ಮನವಿ ಸಲ್ಲಿಸಿದ್ದರು. ವಿಮಾ ಕಂಪನಿಯವರು ₹4.9 ಲಕ್ಷ ಸಂದಾಯ ಮಾಡಿ ಬಾಕಿ ಹಣ ಪಾವತಿಸಲು ನಿರಾಕರಿಸಿದ್ದರು. ವಿಮಾ ಕಂಪನಿಯ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಫಕೀರಪ್ಪ ದೂರು ಸಲ್ಲಿಸಿದ್ದರು.
ವಿಮಾ ಕಂಪನಿಯು ಬಾಕಿ ₹3.45 ಲಕ್ಷಕ್ಕೆ 2024 ಜೂನ್ 28ರಿಂದ ವಾರ್ಷಿಕ ಶೇ 10 ಬಡ್ಡಿ ಲೆಕ್ಕ ಹಾಕಿ ವಿಮಾದಾರಗೆ ಪಾವತಿಸಬೇಕು, ಪರಿಹಾರ ಮತ್ತು ಪ್ರಕರಣದ ವೆಚ್ಚ ನೀಡಬೇಕು ಎಂದು ಆಯೋಗ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.