ADVERTISEMENT

ಹುಬ್ಬಳ್ಳಿ: ಕೊರೊನಾವೈರಸ್ ಸೋಂಕಿತರಿಗಿಂತ ಗುಣಮುಖರೇ ಹೆಚ್ಚು

ಕಿಮ್ಸ್‌ನಲ್ಲಿ ಶೇ 50ರಷ್ಟು ಬೆಡ್‌ಗಳು ಖಾಲಿ, ಕೆಲ ಕೋವಿಡ್‌ ಕೇರ್‌ ಕೇಂದ್ರಗಳು ತೆರವು

ಪ್ರಮೋದ
Published 1 ನವೆಂಬರ್ 2020, 4:33 IST
Last Updated 1 ನವೆಂಬರ್ 2020, 4:33 IST

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡ ಪರಿಣಾಮ ಕಿಮ್ಸ್ ಆಸ್ಪತ್ರೆಯಲ್ಲಿ ಶೇ 50ರಷ್ಟು ಬೆಡ್‌ಗಳು ಖಾಲಿಯಾಗಿವೆ. ಹುಬ್ಬಳ್ಳಿಯ ಆಯುರ್ವೇದ ಆಸ್ಪತ್ರೆಗಳು ಸೇರಿದಂತೆ ಕೆಲ ಕೋವಿಡ್‌ ಕೇರ್‌ ಕೇಂದ್ರಗಳನ್ನು ರದ್ದು ಮಾಡಲಾಗಿದೆ. ಅಕ್ಟೋಬರ್‌ನಲ್ಲಿ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯೇ ಅಧಿಕವಾಗಿದೆ.

ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಲ್ಲಿ 6,101 ಸೋಂಕಿತರು ಪತ್ತೆಯಾಗಿದ್ದು, 5,587 ಜನ ಗುಣಮುಖರಾಗಿದ್ದಾರೆ. ಅಕ್ಟೋಬರ್‌ನಲ್ಲಿ 3,117 ಸೋಂಕಿತರು ಪತ್ತೆಯಾಗಿದ್ದು, 5,149 ಜನ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾದ ಬಳಿಕ ನಿತ್ಯ 10–20 ಪ್ರಕರಣಗಳು ವರದಿಯಾಗುತ್ತಿದ್ದವು. ಕ್ರಮೇಣ ಈ ಸಂಖ್ಯೆ ಹೆಚ್ಚಳವಾಗಿತ್ತು. ಒಂದೇ ದಿನ 300ರಿಂದ 400 ಪ್ರಕರಣಗಳು ವರದಿಯಾದ ಉದಾಹರಣೆಯೂ ಇದೆ. ಆದರೆ, ಕಳೆದ ಎರಡು ತಿಂಗಳುಗಳಿಂದ ಸೋಂಕಿತರ ಸಂಖ್ಯೆ ನಿಧಾನವಾಗಿ ಇಳಿಮುಖವಾಗುತ್ತಿದೆ.

ADVERTISEMENT

ಆರಂಭದ ದಿನಗಳಲ್ಲಿ ಕಿಮ್ಸ್‌, ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್‌, ಆಕ್ಸಿಜನ್‌ ಮತ್ತು ವೆಂಟಿಲೇಟರ್‌ಗಳಿಗೆ ತೀವ್ರ ಅಭಾವ ಕಾಡಿತ್ತು. ಹೀಗಾಗಿ ಆಸ್ಪತ್ರೆಯಲ್ಲಿ ದಾಖಲಾಗಲು ಅವರಿವರ ಶಿಫಾರಸು ಪಡೆಯಲು ಭಾರಿ ಪೈಪೋಟಿಯೂ ನಡೆಯುತ್ತಿತ್ತು. ತುರ್ತು ಪರಿಸ್ಥಿತಿ ನಿಭಾಯಿಸಲು ರೈಲ್ವೆ ಬೋಗಿಗಳನ್ನೂ ಆಸ್ಪತ್ರೆಗಳಾಗಿ ಮಾರ್ಪಡಿಸಲಾಗಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ‘ಸೋಂಕಿತರ ಪ್ರಮಾಣ ಕಡಿಮೆಯಾದ ಕಾರಣ ಬಹಳಷ್ಟು ಬೆಡ್‌ಗಳು ಖಾಲಿಯಿವೆ. ಕೆಲ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಒಲವು ತೋರುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಪೈಕಿ 80ರಿಂದ 90 ಸೋಂಕಿತರಷ್ಟೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ನಿತ್ಯ 2000ರಿಂದ 2500 ಸಾವಿರ ಜನರ ಮೂಗು ಮತ್ತು ಗಂಟಲ ದ್ರವದ ಮಾದರಿ ಪಡೆದು ಪರೀಕ್ಷೆ ಮಾಡಿದರೂ ಸೋಂಕಿತರ ಸಂಖ್ಯೆ 100ರ ಒಳಗೆ ಬರುತ್ತಿದೆ’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ ಮದೀನಕರ ‘ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಸದ್ಯಕ್ಕೆ ಯಾರೂ ಇಲ್ಲ. ಹುಬ್ಬಳ್ಳಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕೇಂದ್ರಗಳನ್ನು ತೆರವು ಮಾಡಿದ್ದೇವೆ. ಸೋಂಕಿತರ ಸಂಖ್ಯೆ ಹೆಚ್ಚಾದರೆ ತುರ್ತು ಸಮಯಕ್ಕೆ ಅಣ್ಣಿಗೇರಿ, ಪೊಲೀಸ್‌ ಹೆಡ್‌ಕ್ವಾಟ್ರರ್ಸ್‌, ಅಂಜುಮನ್‌ ಸಂಸ್ಥೆ ಮತ್ತು ಬಿ.ಡಿ. ಜತ್ತಿ ಆಯುರ್ವೇದಿಕ್‌ ಕಾಲೇಜುಗಳಲ್ಲಿ ಕೇಂದ್ರಗಳನ್ನು ಉಳಿಸಿಕೊಂಡಿದ್ದೇವೆ’ ಎಂದರು.

ಮುಂದೆಯೂ ಇರಲಿ ಎಚ್ಚರಿಕೆ: ದೇಸಾಯಿ

ಡಿಮಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ‘ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು ನಮಗೂ ಅಚ್ಚರಿ ತಂದಿದೆ. ಸರ್ಕಾರದ ಕ್ರಮಗಳು ಮತ್ತು ಜಿಲ್ಲೆಯಲ್ಲಿ ಎಂಟು ಸಾವಿರ ಜನರಿಗೆ ಕೋವಿಡ್ ಅಪಾಯದ ಬಗ್ಗೆ ಜಾಗೃತಿ ಮೂಡಿಸಿದ್ದು ಅನುಕೂಲವಾಗಿದೆ. ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಸೋಂಕಿನ ಶಕ್ತಿಯೂ ಕಡಿಮೆಯಾಗಿರಬಹುದು’ ಎಂದು ಅಭಿಪ್ರಾಯಪಟ್ಟರು.

‘ಮೂರ್ನಾಲ್ಕು ವಾರಗಳ ಹಿಂದೆ ನಿತ್ಯ ಶೇ 15ರಷ್ಟು ಸೋಂಕಿತರು ಪತ್ತೆಯಾಗುತ್ತಿದ್ದರು. ಈಗ ಶೇ 5ಕ್ಕಿಂತಲೂ ಕಡಿಮೆಯಾಗಿದೆ. ಇನ್ನು ಎರಡ್ಮೂರು ತಿಂಗಳು ಎಚ್ಚರಿಕೆಯಿಂದ ಇದ್ದರೆ ಕೋವಿಡ್‌ನಿಂದ ಮುಕ್ತರಾಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.