ADVERTISEMENT

ಕೋವಿಡ್‌ ಲಾಕ್‌ಡೌನ್‌: ಅನಗತ್ಯ ಓಡಾಟ, ಬಿಸಿ ಮುಟ್ಟಿಸಿದ ಪೊಲೀಸ್‌ ಕಮಿಷನರ್‌

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 8:34 IST
Last Updated 30 ಏಪ್ರಿಲ್ 2021, 8:34 IST
ಹುಬ್ಬಳ್ಳಿಯ ಹೊಸೂರು ವೃತ್ತದಲ್ಲಿ ಶುಕ್ರವಾರ ವಾಹನಗಳ ತಪಾಸಣೆ ನಡೆಸಿದ ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಲಾಬೂರಾಮ್‌
ಹುಬ್ಬಳ್ಳಿಯ ಹೊಸೂರು ವೃತ್ತದಲ್ಲಿ ಶುಕ್ರವಾರ ವಾಹನಗಳ ತಪಾಸಣೆ ನಡೆಸಿದ ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಲಾಬೂರಾಮ್‌   

ಹುಬ್ಬಳ್ಳಿ: ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಶುಕ್ರವಾರ ನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಜನರಿಗೆ ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಲಾಬೂರಾಮ್‌ ‘ಬಿಸಿ’ ಮುಟ್ಟಿಸಿದರು.

ಬೆಳಿಗ್ಗೆಯಿಂದಲೇ ನಗರದ ಹೊಸೂರು ವೃತ್ತ, ಕೇಶ್ವಾಪುರ ಸರ್ಕಲ್‌, ಕೋರ್ಟ್‌ ಸರ್ಕಲ್‌, ವಿದ್ಯಾನಗರ, ಉಣಕಲ್‌ ಬಳಿ ತಮ್ಮ ಸಿಬ್ಬಂದಿ ಜೊತೆ ಕಾರ್ಯಾಚರಣೆ ನಡೆಸಿದರು. ಅಗತ್ಯ ಸೇವೆಗಳಿಗಾಗಿ ಓಡಾಡುತ್ತಿದ್ದ ವಾಹನಗಳನ್ನು ಮಾತ್ರ ಬಿಡುತ್ತಿದ್ದರು. ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ದಂಡ ವಿಧಿಸಿ ವಾಪಸ್‌ ಕಳುಹಿಸಿದರು. ಇದೇ ರೀತಿ ಇನ್ನೊಂದು ಸಲ ಓಡಾಡಿದರೆ ವಾಹನ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ‌ಪ್ರತಿ ವಾಹನಗಳ ಚಾಲಕರಿಂದ ದಾಖಲೆ ಪಡೆದು ಪರಿಶೀಲಿಸಿದರು.

ವಾಹನಗಳ ತಪಾಸಣೆಗೆ ಖದ್ದು ಕಮಿಷನರ್‌ ನಿಂತಿದ್ದನ್ನು ನೋಡಿದ ಕೆಲ ವಾಹನ ಸವಾರರು ದೂರದಿಂದಲೇ ವಾಪಸ್‌ ಹೋಗುತ್ತಿದ್ದ ಚಿತ್ರಣ ಹೊಸೂರು ವೃತ್ತದ ಬಳಿ ಕಂಡು ಬಂತು.

ADVERTISEMENT

ಜನಜಂಗುಳಿ: ಲಾಕ್‌ಡೌನ್‌ನ ಮೂರನೇ ದಿನವಾದ ಶುಕ್ರವಾರ ಅಮರಗೋಳದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ಹಾಗೂ ಹಣ್ಣುಗಳ ಖರೀದಿಗೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು.

ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಮತ್ತು ಅಧಿಕಾರಿಗಳು ಪದೇ ಪದೇ ಹೇಳಿದರೂ ಕೆಲವರು ಅಂತರ ಕಾಯ್ದುಕೊಳ್ಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.