ADVERTISEMENT

‘ಜನಾಶೀರ್ವಾದ’ ಯಶಸ್ಸಿಗೆ ತಂಡಗಳ ರಚನೆ

ಮಹಾನಗರ ಬಿಜೆಪಿ ನಾಲ್ಕು ಮಂಡಲಗಳ ಸಭೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 16:33 IST
Last Updated 10 ಆಗಸ್ಟ್ 2021, 16:33 IST
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಮಾತನಾಡಿದರು   

ಹುಬ್ಬಳ್ಳಿ: ಇತ್ತೀಚೆಗೆ ಕೇಂದ್ರ ಸಚಿವರಾಗಿ ನೇಮಕವಾದ ರಾಜ್ಯದ ನಾಲ್ಕು ಜನ ಸಂಸದರು ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಫೆ. 16ರಂದು ನಡೆಸಲಿರುವ ಜನಾಶೀರ್ವಾದ ಯಾತ್ರೆಯನ್ನು ಯಶಸ್ವಿಗೊಳಿಸಲು ಜಿಲ್ಲೆಯಲ್ಲಿ ತಂಡಗಳನ್ನು ರಚಿಸಲಾಗಿದೆ.

ಈ ಕುರಿತು ಚರ್ಚಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಮಟ್ಟದ ಎಲ್ಲ ಮಂಡಲಗಳ ಸಭೆ ಮಂಗಳವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ ‘ಜಿಲ್ಲೆಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಬರಲಿದ್ದಾರೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಪ್ರಮುಖ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ 500 ಜನ ಪಾಲ್ಗೊಳ್ಳುತ್ತಿದ್ದಾರೆ. ಕೋವಿಡ್‌ ನಿಯಮ ಪಾಲಿಸಿ ಬೈಕ್‌ ರ್‍ಯಾಲಿ ಮೂಲಕ ಸ್ವಾಗತಿಸಲಾಗುವುದು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಮಾತನಾಡಿ ‘ದೇಶದಾದ್ಯಂತ 258 ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಸಚಿವರು ಯಾತ್ರೆ ಮಾಡಲಿದ್ದಾರೆ. ಇತ್ತೀಚೆಗೆ ಲೋಕಸಭಾ ಕಲಾಪ ಸುಗಮವಾಗಿ ನಡೆಯಲು ವಿರೋಧ ಪಕ್ಷದವು ಅವಕಾಶ ಕೊಟ್ಟಿಲ್ಲ. ಸಮಯ ಹಾಳು ಮಾಡಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಆದ್ದರಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇರೆಗೆ ಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ತಿಪ್ಪಣ್ಣ ಮಜ್ಜಗಿ, ಬಿಜೆಪಿ ಸೆಂಟ್ರಲ್ ಅಧ್ಯಕ್ಷ ಸಂತೋಷ ಚವ್ಹಾಣ, ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಪಶ್ಚಿಮ ಕ್ಷೇತ್ರದ ಅಧ್ಯಕ್ಷ ಬಸವರಾಜ ಗರಗ, ಧಾರವಾಡ ನಗರ ಘಟಕದ ಅಧ್ಯಕ್ಷ ಸುನೀಲ ಮೋರೆ, ಜಿಲ್ಲಾ ವಕ್ತಾರ ರವಿ ನಾಯಕ, ಸಿದ್ದು ಮೊಗಲಿಶೆಟ್ಟರ, ಮಹೇಂದ್ರ ಕೌತಾಳ, ಕೃಷ್ಣಾ ಗಂಡಗಾಳೇಕರ, ವೀರೇಶ ಸಂಗಳದ, ತೋಟಪ್ಪ ನೀಡಗುಂದ, ರಾಜೇಶ್ವರಿ ಸಾಲಗಟ್ಟಿ, ಪ್ರಶಾಂತ ಜಾಧವ, ಪ್ರಶಾಂತ ಹಾವಣಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.