ಹುಬ್ಬಳ್ಳಿ: ಇಲ್ಲಿನ ಆನಂದನಗರದ ಮಸೀದಿ ಬಳಿ ಇತ್ತೀಚೆಗೆ ತಲ್ವಾರ್ ಹಿಡಿದುಕೊಂಡು ರೀಲ್ಸ್ ಮಾಡಿದ್ದ ಇಬ್ಬರು ಆರೋಪಿಗಳನ್ನು, ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೋಪಾಲ ವಾಲ್ಮೀಕಿ ಮತ್ತು ಆರೀಫ್ ವಾಲ್ಮೀಕಿ ಬಂಧಿತ ಆರೋಪಿಗಳು. ತಲ್ವಾರ್ ಹಿಡಿದು ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
‘ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ನಗರದ ವಿವಿಧೆಡೆ ಮನೆ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿರುವ ಕುರಿತು ತಿಳಿದು ಬಂದಿದೆ. ಈ ಪ್ರಕರಣಗಳಿಗೆ ಸಂಬಂಧಿಸಿ, ಹನುಮಂತ ಮಣ್ಣವಡ್ಡರ ಮತ್ತು ಲಿಯಾಖತ್ತಾಲಿ ಅವರನ್ನು ಬಂಧಿಸಿ, ಎಂಟು ದ್ವಿ ಚಕ್ರವಾಹನ, 20 ಗ್ರಾಂ ಬಂಗಾರದ ಸರ ಸೇರಿ ಒಟ್ಟು ₹6 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್‌ಸ್ಪೆಕ್ಟರ್ ಎಂ.ಎನ್. ಸಿಂಧೂರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಪಿಎಸ್ಐಗಳಾದ ಬಿ.ಎನ್. ಸಾತಣ್ಣವರ, ವಿಶ್ವನಾಥ ಆಲಮಟ್ಟಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಅಪಘಾತ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಶನಿವಾರ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುವ ವೇಳೆ ತಾಲ್ಲೂಕಿನ ಹೆಬಸೂರು ಗ್ರಾಮದ ಬಳಿ, ಧಾರವಾಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಸಿಲೆಂಡರ್ ಸಾಗಾಟದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ.
ಎರಡೂ ವಾಹನಗಳು ಜಖಂಗೊಂಡಿದೆ. ಗೂಡ್ಸ್ ವಾಹನದಲ್ಲಿ ತುಂಬಿದ ಸಿಲೆಂಡರ್ ಇರಲಿಲ್ಲ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.