ADVERTISEMENT

CT ರವಿ ಆಕ್ಷೇಪಾರ್ಹ ಪದ ಬಳಸಿದ ಪ್ರಕರಣ: ಹೆಬ್ಬಾಳಕರ ದೂರು ನೀಡಿಲ್ಲ- ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2025, 14:39 IST
Last Updated 1 ಜನವರಿ 2025, 14:39 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಹುಬ್ಬಳ್ಳಿ: ‘ವಿಧಾನ ಪರಿಷತ್‌ನಲ್ಲಿ ಸಿ.ಟಿ.ರವಿ ತಮ್ಮ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಾರೆಂದು ಆರೋಪಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಈವರೆಗೆ ಯಾವುದೇ ದೂರು ಅಥವಾ ಸಾಕ್ಷ್ಯಾಧಾರ ನನಗೆ ನೀಡಿಲ್ಲ. ದೂರು ನೀಡಿದರೆ ಮುಂದಿನ ಕ್ರಮ ಕೈಗೊಳ್ಳುವೆ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೆಲ ದೃಶ್ಯ ಮಾಧ್ಯಮಗಳಲ್ಲಿ ವಿಡಿಯೊ ಪ್ರಸಾರ ಆಗಿದೆ ಎನ್ನಲಾಗಿದೆ. ಈ ವಿಡಿಯೊ ನನಗೆ ಸಿಕ್ಕಿಲ್ಲ. ವಿಡಿಯೊ ಅಥವಾ ಆಡಿಯೊ ಸಾಕ್ಷ್ಯಗಳನ್ನು ನಮಗೆ ನೀಡಿದರೆ ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಅವುಗಳ ನೈಜತೆ ಪರಿಶೀಲಿಸಲಾಗುವುದು’ ಎಂದರು.

‘ಪ್ರಯೋಗಾಲಯದ ವರದಿ ಆಧಾರದ ಮೇಲೆ ಪ್ರಕರಣವನ್ನು ಎಥಿಕ್ಸ್‌ ಸಮಿತಿಗೆ ನೀಡಬೇಕೇ, ಬೇಡವೇ ಎಂಬುದನ್ನು ತೀರ್ಮಾನಿಸುವೆ. ನನ್ನ ಮೇಲೆ ಬಿಜೆಪಿ ಅಥವಾ ಕಾಂಗ್ರೆಸ್‌ನ ಒತ್ತಡ ಇಲ್ಲ. ನಾನು ಯಾರ ಮಾತೂ ಕೇಳಲ್ಲ’ ಎಂದರು.

ADVERTISEMENT

‘ಘಟನೆ ನಡೆದ ದಿನ ಡಿಸೆಂಬರ್ 19ರಂದು ಮಧ್ಯಾಹ್ನ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ಜೋರಾಗಿತ್ತು. ಆಗ ಕಲಾಪ ಮುಂದೂಡಿ, ನಾನು ಸದನದಿಂದ ಹೊರಬಂದಿದ್ದೆ. ಆ ನಂತರವೂ ಸದಸ್ಯರ ವಾಗ್ವಾದ ಮುಂದುವರಿದಿತ್ತು. ಆ ವೇಳೆ ಸಿ.ಟಿ. ರವಿ ತಮ್ಮ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ ಘಟನೆಯ ವಿವರವನ್ನು ನನಗೆ ನೀಡಿದರು. ಕಲಾಪ ಮುಂದೂಡಿದ್ದರಿಂದ ಆಡಿಯೊ– ವಿಡಿಯೊ ರೆಕಾರ್ಡಿಂಗ್‌ ಸ್ಥಗಿತ ಆಗಿದ್ದವು. ಹೀಗಾಗಿ ಈ ಘಟನೆಗೆ ನಮ್ಮಲ್ಲಿ ಯಾವುದೇ ಸಾಕ್ಷಿಗಳಿಲ್ಲ’ ಎಂದರು.

ಪಂಚನಾಮೆಗೆ ಅವಕಾಶ ಇಲ್ಲ:

‘ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೀ ಅವರು ಹಿರೇಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿ.ಟಿ.ರವಿ ಕೂಡ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಸರ್ಕಾರವು ಸಿಐಡಿಗೆ ನೀಡಿದೆ. ಸ್ಥಳದ ಪಂಚನಾಮೆ ನಡೆಸಲು ಸಿಐಡಿ ಅಧಿಕಾರಗಳು ನನ್ನ ಅನುಮತಿ ಕೇಳಿದ್ದಾರೆ. ಯಾವ ರೀತಿ ಪಂಚನಾಮೆ ನಡೆಸುತ್ತಾರೆ ಎನ್ನುವ ಬಗ್ಗೆ ವಿವರಿಸಬೇಕು. ನಾನು ಈವರೆಗೆ ಅನುಮತಿ ನೀಡಿಲ್ಲ’ ಎಂದರು.

‘ಸುದೀರ್ಘ ಇತಿಹಾಸವುಳ್ಳ ರಾಜ್ಯದ ವಿಧಾನ ಪರಿಷತ್‌ ಅಂಗಳದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ನಾನು 45 ವರ್ಷಗಳಿಂದ ಸದನದಲ್ಲಿದ್ದೇನೆ. ಇಂತಹ ಘಟನೆ ಬಗ್ಗೆ ಕೇಳಿಲ್ಲ, ನೋಡಿಲ್ಲ. ಈ ಪ್ರಕರಣಕ್ಕೆ ಅಂತ್ಯ ಹಾಡಲು ಸಿದ್ಧನಿದ್ದೇನೆ. ಲಕ್ಷ್ಮೀ ಮತ್ತು ಸಿ.ಟಿ. ರವಿ ಒಪ್ಪಿದರೆ ಇಬ್ಬರನ್ನೂ ಕರೆಸಿ ಮಾತನಾಡಿ, ಪ್ರಕರಣ ಕೊನೆಗಾಣಿಸಲು ಪ್ರಯತ್ನಿಸುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.