ADVERTISEMENT

ಮಗನ ಸಾವಿಗೆ ನ್ಯಾಯ ಕೇಳಿ ಮೋದಿಗೆ ತಂದೆ ಪತ್ರ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 16:30 IST
Last Updated 27 ಜೂನ್ 2019, 16:30 IST
   

ಹುಬ್ಬಳ್ಳಿ: ಹರಿಯಾಣದ ರೋಹ್ಟಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನಗರದ ಚೇತನಾ ಕಾಲೊನಿಯ ವೈದ್ಯ ವಿದ್ಯಾರ್ಥಿ ಡಾ. ಓಂಕಾರ ಬರಿದಾಬಾದ್‌ ಅವರ ತಂದೆ ಮಾಣಿಕ್‌ ಬರಿದಾಬಾದ್‌, ಮಗನ ಸಾವಿಗೆ ನ್ಯಾಯ ಕೇಳಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.

ಸೋಮವಾರ ಮೇಲ್‌ ಮೂಲಕ ಪತ್ರ ಕಳುಹಿಸಿರುವ ಅವರು, ‘ಮಗನಿಗಾದ ಅನ್ಯಾಯ ಮತ್ಯಾರಿಗೂ ಆಗದಿರಲಿ’ ಎಂದು ವಿನಂತಿಸಿಕೊಂಡಿದ್ದಾರೆ.

‘ನೈರುತ್ಯ ರೈಲ್ವೆ ವಲಯದಲ್ಲಿ ಡಿ ವರ್ಗದ ನೌಕರನಾಗಿ ಕೆಲಸ ಮಾಡಿದ್ದೆ. ಹೆಂಡತಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾಳೆ. ಹಿರಿಯ ಮಗ ಓಂಕಾರ ಶಿವಮೊಗ್ಗದ ಕಿಮ್ಸ್‌ನಲ್ಲಿ ಎಂಬಿಬಿಎಸ್‌ ಪೂರ್ಣಗೊಳಿಸಿ, ಮೆರಿಟ್‌ ಆಧಾರದ ಮೇಲೆ ರೋಹ್ಟಕ್‌ನ ಪಿಎಂಐಎಸ್‌ ಕಾಲೇಜಿನಲ್ಲಿ ಎಸ್‌ಟಿ ಕೋಟಾದಡಿ ಎಂಡಿ ಓದುತ್ತಿದ್ದನು. ಆರು ತಿಂಗಳಲ್ಲಿ ಎಂ.ಡಿ ಮುಗಿಯುತ್ತಿತ್ತು. ಆದರೆ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥೆ ಗೀತಾ ಗಟವಾಳ ಅವರು, ಎಸ್‌ಟಿ ಸಮುದಾಯದವನು ಎಂದು ಎರಡು ವರ್ಷಗಳ ಕಾಲ ಕಿರುಕುಳ ನೀಡಿದ್ದಾರೆ. ಆತ ಮಂಡಿಸಿದ ಪ್ರಬಂಧವನ್ನು 20 ಬಾರಿ ತಿರಸ್ಕರಿಸಿ, ಮಾನಸಿಕ ಹಿಂಸೆ ನೀಡಿದ್ದಾರೆ. ಆದರೂ, ಆತನ ಪ್ರಬಂಧಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ನೊಂದು ಆತ ಜೂನ್‌ 13ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಪ್ರಧಾನಿ ಅವರಿಗೆ ಕಳುಹಿಸಿದ ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ವಿಭಾಗದ ಮುಖ್ಯಸ್ಥೆ ವಿರುದ್ಧ ಈಗಾಗಲೇ ದೂರು ದಾಖಲಿಸಲಾಗಿದೆ. ಆದರೆ, ನಾಪತ್ತೆಯಾಗಿರುವ ಅವರನ್ನು ಪೊಲೀಸರು ಇನ್ನೂ ಪತ್ತೆ ಹಚ್ಚಿ ಬಂಧಿಸಿಲ್ಲ. ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಮೇಲ್‌ ಪತ್ರವನ್ನು ಮೇಲ್‌ ಮಾಡುವುದರ ಜೊತೆಗೆ ಅದರ ಪ್ರತಿಯನ್ನು ಶಾಸಕ ಜಗದೀಶ ಶೆಟ್ಟರ್‌ ಅವರಿಗೂ ನೀಡಿದ್ದಾರೆ. ಅಲ್ಲದೆ, ಕೇಂದ್ರ ವೈದ್ಯಕೀಯ ಸಚಿವ ಹರ್ಷವರ್ಧನ್‌, ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್‌ ಸೇರಿದಂತೆ ಅನೇಕ ಸಚಿವರಿಗೂ ಮೇಲ್‌ ಕಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.