ADVERTISEMENT

ಶೋಷಿತರ ಆಶಾಕಿರಣ ಬಸವಲಿಂಗಪ್ಪ : ಪಿತಾಂಬ್ರಪ್ಪ ಬಿಳಾರ

ಬಿ. ಬಸವಲಿಂಗಪ್ಪನವರ 27ನೇ ಪರಿನಿಬ್ಬಾಣ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 13:06 IST
Last Updated 26 ಡಿಸೆಂಬರ್ 2019, 13:06 IST

ಹುಬ್ಬಳ್ಳಿ: ‘ಬಿ. ಬಸವಲಿಂಗಪ್ಪನವರು ಕರ್ನಾಟಕದ ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದಾರೆ. ದಲಿತ ಚಳವಳಿಗೆ ಅಡಿಪಾಯ ಹಾಕಿದ ಅವರು, ಮುಂದೆ ಅದನ್ನು ಬಲವಾಗಿ ಕಟ್ಟಲು ಬೆನ್ನೆಲುಬಾಗಿ ನಿಂತರು’ ಎಂದು ಹಿರಿಯ ದಲಿತ ಮುಖಂಡ ಪಿತಾಂಬ್ರಪ್ಪ ಬಿಳಾರ ಹೇಳಿದರು.

ಬಸವಲಿಂಗಪ್ಪನವರ 27ನೇ ಪರಿನಿಬ್ಬಾಣದ ಅಂಗವಾಗಿ, ಹುಬ್ಬಳ್ಳಿಯ ಮಹಾತ್ಮ ಗಾಂಧಿ ಉದ್ಯಾನದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ‘ಪೌರಾಡಳಿತ ಸಚಿವರಾಗಿದ್ದ ಬಸವಲಿಂಗಪ್ಪ, ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಮಲ ಹೋರುವ ಪದ್ಧತಿಯನ್ನು ನಿಷೇಧಿಸುವ ಕಾನೂನು ಜಾರಿಗೆ ತಂದರು’ ಎಂದರು.

‘ಸಂವಿಧಾನ ಶಿಲ್ಫಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಅವರು, 70ರ ದಶಕದಲ್ಲಿ ಭದ್ರಾವತಿಯಲ್ಲಿ ಮೊಳಕೆಯೊಡೆದ ದಲಿತ ಸಂಘರ್ಷ ಸಮಿತಿಯನ್ನು ರಾಜ್ಯದ ಮೂಲೆ ಮೂಲೆಗಳಿಗೆ ತಲುಪಿಸುವ ಕೆಲಸ ಮಾಡಿದರು. ಆ ಮೂಲಕ, ದಲಿತರ ದೌರ್ಜನ್ಯದ ವಿರುದ್ಧ ಎಲ್ಲಾ ಕಡೆಯಿಂದಲೂ ದನಿ ಮೊಳಗಲು ಕಾರಣರಾದರು’ ಎಂದು ಹೇಳಿದರು.

ADVERTISEMENT

‘ಕನ್ನಡ ಸಾಹಿತ್ಯದಲ್ಲಿರುವುದೆಲ್ಲವೂ ಬೂಸಾ ಸಾಹಿತ್ಯ ಎಂಬ ಹೇಳಿಕೆಯ ಮೂಲಕ, ಸಾಹಿತ್ಯ ಲೋಕದಲ್ಲಿ ಶೋಷಿತರ ಕಡೆಗಣನೆ ಹಾಗೂ ರಾಜಕೀಯವನ್ನು ನೇರವಾಗಿ ವಿರೋಧಿಸಿದರು. ವೈಚಾರಿಕ ಕಿಡಿ ಹೊತ್ತಿಸಿದ ತಮ್ಮ ಹೇಳಿಕೆಯಿಂದಾಗಿ, ಸಚಿವ ಸ್ಥಾನ ಕಳೆದುಕೊಂಡ ಅವರು, ಬಳಿಕ ದಲಿತ ಚಳವಳಿಯನ್ನು ಕಟ್ಟುವಲ್ಲಿ ತೊಡಗಿಸಿಕೊಂಡರು. ಅವರ ಹೋರಾಟದಿಂದಾಗಿ, ನೂರಾರು ಯುವಕರು ದಲಿತ ಚಳವಳಿಗೆ ಧುಮುಕಿದರು. ‘1990ರಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ ಬೌದ್ಧ ಧರ್ಮಕ್ಕೆ ದಲಿತರ ಮತಾಂತರ ಕಾರ್ಯಕ್ರಮಕ್ಕೆ ಬಸವಲಿಂಗಪ್ಪನವರು ಅತಿಥಿಯಾಗಿ ಬಂದಿದ್ದರು’ ಎಂದು ನೆನೆದರು.

ಸಮತಾ ಸೇನಾ ರಾಜ್ಯ ಘಟಕದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ, ಬಸವರಾಜ ತೇರದಾಳ, ರೇವಣಸಿದ್ಧಪ್ಪ ಹೊಸಮನಿ, ಶಂಕರ ಭೋಜಗಾರ, ಶಂಕರ ಅಜಮನಿ, ಶ್ರೀಕಾಂತ ತಳಕೇರಿ, ರಾಜೇಶ್ವರಿ ಕಿರೇಸೂರ, ಹನುಮಂತು ಹುಣೂರು ಹಾಗೂ ಜಾಕೀರ್ ಕಲಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.