ADVERTISEMENT

ಮೂರು ವರ್ಷಗಳಲ್ಲಿ 506 ಶಾಲೆಗಳಿಗೆ ಹಾನಿ

ಮಳೆ: ನವಲಗುಂದ, ಕಲಘಟಗಿಯಲ್ಲಿ ಹೆಚ್ಚು ಕೊಠಡಿಗಳು ಶಿಥಿಲ

ಪ್ರಮೋದ
Published 10 ಆಗಸ್ಟ್ 2021, 16:32 IST
Last Updated 10 ಆಗಸ್ಟ್ 2021, 16:32 IST
ದುರಸ್ತಿಗೆ ಕಾದಿರುವ ಕಲಘಟಗಿ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ
ದುರಸ್ತಿಗೆ ಕಾದಿರುವ ಕಲಘಟಗಿ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ   

ಹುಬ್ಬಳ್ಳಿ: ಜಿಲ್ಲೆಯಲ್ಲಿ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಸುರಿದ ಮಳೆಯಿಂದಾಗಿ 506 ಶಾಲೆಗಳ 1,373 ಕೊಠಡಿಗಳು ಹಾಳಾಗಿವೆ. ನವಲಗುಂದ ತಾಲ್ಲೂಕಿನಲ್ಲಿ ಹಾನಿ ಪ್ರಮಾಣ ಹೆಚ್ಚಿದೆ.

2019ರಲ್ಲಿ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿತ್ತು. ಮನೆ ಹಾಗೂ ಕೆಲ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ನೀರು ನುಗ್ಗಿತು. ಮೇಲಿಂದ ಮೇಲೆ ಸುರಿದ ಮಳೆಯಿಂದಾಗಿ ಹಳೇ ಶಾಲೆಗಳ ಕೊಠಡಿಗಳು ಬಿರುಕು ಬಿಟ್ಟು ಬಿದ್ದಿದ್ದವು. ಆ ವರ್ಷ 199 ಶಾಲೆಗಳ 444 ಕೊಠಡಿಗಳಿಗೆ ಹಾನಿಯಾಗಿತ್ತು. ದುರಸ್ತಿಗೆ ಕಾದಿದ್ದ ಎಲ್ಲ 444 ಕೊಠಡಿಗಳ ದುರಸ್ತಿ ಕಾರ್ಯಕ್ಕೆ ಈಗಾಗಲೇ ಟೆಂಡರ್ ಆಗಿದ್ದು, 59 ಶಾಲೆಗಳ ಕಾಮಗಾರಿ ಮಾತ್ರ ಪೂರ್ಣಗೊಂಡಿವೆ. ಐದು ಶಾಲೆಗಳನ್ನು ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಗಿದೆ.

2020–21ರಲ್ಲಿ 159 ಶಾಲೆಗಳ 542 ಕೊಠಡಿಗಳಿಗೆ ಹಾನಿಯಾಗಿತ್ತು. ಈ ವರ್ಷ 148 ಶಾಲೆಗಳ 387 ಕೊಠಡಿಗಳಿಗೆ ಹಾನಿಯಾಗಿದ್ದು, ದುರಸ್ತಿ ಕಾರ್ಯ ಇನ್ನು ಆರಂಭವಾಗಿಲ್ಲ.

ADVERTISEMENT

ಮೂರು ವರ್ಷಗಳ ಅವಧಿಯಲ್ಲಿ ನವಲಗುಂದ ತಾಲ್ಲೂಕಿನಲ್ಲಿ 315 ಮತ್ತು ಕಲಘಟಗಿ ತಾಲ್ಲೂಕಿನಲ್ಲಿ 295 ಕೊಠಡಿಗಳಿಗೆ ಹಾನಿಯಾಗಿದೆ.

ಅನುದಾನಕ್ಕೆ ಮೊರೆ: ಪ್ರಕೃತಿ ವಿಕೋಪದಿಂದ ಆದ ಹಾನಿಯನ್ನು ಸರಿಪಡಿಸಲು ಎನ್‌ಡಿಆರ್‌ಎಫ್‌ ಯೋಜನೆಯಲ್ಲಿ ಅನುದಾನ ಲಭಿಸುತ್ತಿದೆ. ಕೊಠಡಿ ದುರಸ್ತಿಗೆ ಬೇಕಾದ ಅಂದಾಜು ವೆಚ್ಚಕ್ಕೂ ಯೋಜನೆಯಲ್ಲಿ ಸಿಗುವ ಹಣಕ್ಕೂ ಸಾಕಷ್ಟು ವ್ಯತ್ಯಾಸ ಇರುವುದರಿಂದ ಅನುದಾನಕ್ಕಾಗಿ ಬೇರೆ ಬೇರೆ ಮೂಲಗಳ ಮೊರೆ ಹೋಗಲಾಗುತ್ತಿದೆ.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಲ್‌.ಹಂಚಾಟೆ ‘ಮಳೆ ನಿರಂತರವಾಗಿ ಬಂದರೆ ಹಳೆಯ ಕಟ್ಟಡಗಳು ಕುಸಿಯುತ್ತವೆ. 2019 ಮತ್ತು 2020–21ರಲ್ಲಿ ಹೆಚ್ಚು ಶಾಲಾ ಕೊಠಡಿಗಳಿಗೆ ಹಾನಿಯಾಗಿದ್ದು, ಈಗ ಶಾಲೆಯಲ್ಲಿ ಭೌತಿಕ ತರಗತಿಗಳು ನಡೆಯುತ್ತಿಲ್ಲದ ಕಾರಣ ವೇಗವಾಗಿ ಕೆಲಸ ಮಾಡಲು ಅನುಕೂಲವಾಗುತ್ತಿದೆ. ನವಲಗುಂದ ಮತ್ತು ಕಲಘಟಗಿಯಲ್ಲಿ ಪ್ರತಿವರ್ಷ ಕೊಠಡಿಗಳಿಗೆ ಹೆಚ್ಚು ಹಾನಿಯಾಗುತ್ತಿದೆ’ ಎಂದರು.

‘ಹುಬ್ಬಳ್ಳಿ ನಗರದಲ್ಲಿ ದುರಸ್ತಿಗೆ ಕಾದಿದ್ದ ಶಾಲಾ ಕೊಠಡಿಗಳಲ್ಲಿ ಕೆಲವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ, ಇನ್ನೂ ಕೆಲವನ್ರು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಬಳಸಿಕೊಂಡು ದುರಸ್ತಿ ಮಾಡಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೆಲವೆಡೆ ಶಾಲಾ ಕಟ್ಟಡ ನಿರ್ಮಾಣ ಮತ್ತು ದುರಸ್ತಿಗಾಗಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ ಅನುದಾನ ಕೊಡಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.