ADVERTISEMENT

ಕಮಿಷನರ್ ವಿರುದ್ಧ ಡಿಜಿಪಿಗೆ ಕೃಷ್ಣಕಾಂತ್ ಪತ್ರ

ಭೇಟಿಗೆ ನಿರಾಕರಣೆ, ಕರೆ ಮಾಡಿದರೂ ಪ್ರತಿಕ್ರಿಯಿಸದ ಆರ್. ದಿಲೀಪ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 8:38 IST
Last Updated 6 ಅಕ್ಟೋಬರ್ 2020, 8:38 IST
ಪೊಲೀಸ್ ಕಮಿಷನರ್ ಆರ್‌. ದಿಲೀಪ್ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಡಿಸಿಪಿ ಪಿ. ಕೃಷ್ಣಕಾಂತ್ ಬರೆದಿರುವ ಪತ್ರ
ಪೊಲೀಸ್ ಕಮಿಷನರ್ ಆರ್‌. ದಿಲೀಪ್ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಡಿಸಿಪಿ ಪಿ. ಕೃಷ್ಣಕಾಂತ್ ಬರೆದಿರುವ ಪತ್ರ   

ಹುಬ್ಬಳ್ಳಿ: ಅವಳಿನಗರದ ಪೊಲೀಸ್ ಕಮಿಷನರ್ ಆರ್. ದಿಲೀಪ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಡಿಸಿಪಿ ಪಿ. ಕೃಷ್ಣಕಾಂತ್ ನಡುವಿನ ಶೀತಲ ಸಮರ ತಾರಕಕ್ಕೇರಿದೆ.

ದಿಲೀಪ್ ವರ್ತನೆಗೆ ಬೇಸತ್ತಿರುವ ಕೃಷ್ಣಕಾಂತ್ ಅ. 3ರಂದು ಅವರಿಗೆ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದಾರೆ. ಪತ್ರವನ್ನು ಪೊಲೀಸ್ ಮಹಾನಿರ್ದೇಶಕರಿಗೂ ಕಳಿಸಿರುವ ಅವರು, ಕಮಿಷನರ್‌ ಭೇಟಿಗೆಮುಕ್ತ ಅನುಮತಿ ಹಾಗೂ ಮಾರ್ಗದರ್ಶನ ನೀಡಲು ಸೂಚನೆ ನೀಡುವಂತೆ ಕೋರಿದ್ದಾರೆ.

ಪತ್ರದಲ್ಲೇನಿದೆ?:

ADVERTISEMENT

‘ಸೂಕ್ಷ್ಮ ಪ್ರಕರಣವೊಂದರ ತನಿಖೆಯ ಉಸ್ತುವಾರಿ ಹಾಗೂ ಪ್ರಗತಿ ಕುರಿತು ಮಾತನಾಡಲು ನಿಮ್ಮ ಭೇಟಿಗೆ ಪ್ರಯತ್ನಿಸಿದೆ. ಕಚೇರಿಯ ದೂರವಾಣಿಗೆ ಕರೆ ಮಾಡಿದಾಗ ನೀವು ಬೇರೊಂದು ಕರೆಯಲ್ಲಿರುವುದಾಗಿ, ನೀವೇ ವಾಪಸ್ ಕರೆ ಮಾಡುವುದಾಗಿ ಸಿಬ್ಬಂದಿ ತಿಳಿಸಿದರು. ಎಷ್ಟೊತ್ತಾದರೂ ನನಗೆ ಕರೆ ಬರಲಿಲ್ಲ. ಮತ್ತೊಮ್ಮೆ ದೂರವಾಣಿಗೆ ಕರೆ ಮಾಡಿದಾಗ, ನೀವು ಮನೆಗೆ ಹೋಗಿರುವುದಾಗಿ ಹೇಳಿದರು.

‘ಮನೆ ದೂರವಾಣಿಗೆ ಕರೆ ಮಾಡಿದಾಗ ನೀವು ಭೇಟಿಗೆ ನಿರಾಕರಿಸಿ, ಕರೆ ಸ್ಥಗಿತಗೊಳಿಸಿದ್ದೀರಿ. ಯಾವುದೇ ವಿಷಯವಿದ್ದರೂ ಮುಕ್ತವಾಗಿ ನನ್ನನ್ನು ಭೇಟಿ ಮಾಡಿ ಚರ್ಚಿಸಬಹುದು ಎಂದು ನೀವೇ ಹೇಳಿದ್ದೀರಿ. ಈಗ ಭೇಟಿಗೆ ಅವಕಾಶ ನೀಡದಿರುವುದು ಸಮಂಜಸವಲ್ಲ. ಪ್ರತಿ ವಿಷಯದಲ್ಲೂ ನೀವು ಆದೇಶ ಹಾಗೂ ಮಾರ್ಗದರ್ಶನ ನೀಡಿದಾಗ, ದಕ್ಷತೆಯಿಂದ ಕೆಲಸ ಮಾಡಲು ಸಾಧ್ಯ. ಕಚೇರಿ ಬಳಿ ಒಂದೂವರೆ ಗಂಟೆಯಿಂದ ಕಾದರೂ, ಭೇಟಿಗೆ ಅವಕಾಶ ನೀಡಿಲ್ಲ. ಹಾಗಾಗಿ, ಈ ಪತ್ರವನ್ನು ಕಂಟ್ರೋಲ್ ರೂಂ ಮುಖಾಂತರ ನಿಮಗೆ ಸಲ್ಲಿಸುತ್ತಿದ್ದೇನೆ.

‘ಅಕ್ರಮ, ಅನೈತಿಕ ಚಟುವಟಿಕೆಗಳು, ಕೋವಿಡ್–19 ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸದವರ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದವರ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ, ನನ್ನನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದೀರಿ. ಅ. 2ರಂದು ಸೂಕ್ಷ್ಮ ವಿಷಯದ ತನಿಖೆಯ ಬಗ್ಗೆ ವೈರ್‌ಲೆಸ್‌ನಲ್ಲಿ ಮಾಹಿತಿ ಕೇಳಿದ್ದೀರಿ. ಆದರೆ, ಸೂಕ್ಷ್ಮ ವಿಷಯಗಳ ಚರ್ಚೆ ವೈರ್‌ಲೆಸ್ ಅಥವಾ ಪತ್ರದ ಮೂಲಕ ಸಾಧ್ಯವಿಲ್ಲ.

‘ಹಾಗಾಗಿ, ನಿಮ್ಮನ್ನು ಭೇಟಿ ಮಾಡಿ ಚರ್ಚಿಸಲು ನಾನು ಅನುಮತಿ ಕೋರಿದೆ. ನೀವು ಭೇಟಿಗೆ ನಿರಾಕರಿಸಿ, ಕರೆಯನ್ನೂ ಸ್ಥಗಿತಗೊಳಿಸಿದ್ದೀರಿ. ಆದ್ದರಿಂದ, ನಿಮ್ಮ ಭೇಟಿಗೆ ಮುಕ್ತ ಅನುಮತಿ ಹಾಗೂ ಮಾರ್ಗದರ್ಶನ ನೀಡಬೇಕು’ ಎಂದು ಡಿಸಿಪಿ ಕೃಷ್ಣಕಾಂತ್ ಅವರು, ಕಮಿಷನರ್ ಹಾಗೂ ಡಿಜಿಪಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದ ಕುರಿತು ಪ್ರತಿಕ್ರಿಯೆ ಪಡೆಯಲು ದಿಲೀಪ್ ಅವರಮೊಬೈಲ್ ಫೋನ್ ಸಂಖ್ಯೆಗೆ ‘ಪ್ರಜಾವಾಣಿ’ ಕರೆ ಮಾಡಿದಾಗ, ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.