ADVERTISEMENT

ಧಾರವಾಡ: 'ಚಿಗರಿ' ಮಾರ್ಗದಲ್ಲಿ ನಿಜ ಚಿಗರಿ ಓಟ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 12:29 IST
Last Updated 17 ಸೆಪ್ಟೆಂಬರ್ 2021, 12:29 IST
ಬಿಆರ್‌ಟಿಎಸ್‌ನ ‘ಚಿಗರಿ’ ಮಾರ್ಗದಲ್ಲಿ ಶುಕ್ರವಾರ ನಿಜ ಚಿಗರಿಯೊಂದು ಓಡಿದ್ದು-ವಿಡಿಯೊ ಸ್ಕ್ರೀನ್‌ಶಾಟ್‌
ಬಿಆರ್‌ಟಿಎಸ್‌ನ ‘ಚಿಗರಿ’ ಮಾರ್ಗದಲ್ಲಿ ಶುಕ್ರವಾರ ನಿಜ ಚಿಗರಿಯೊಂದು ಓಡಿದ್ದು-ವಿಡಿಯೊ ಸ್ಕ್ರೀನ್‌ಶಾಟ್‌   

ಧಾರವಾಡ: ಹುಬ್ಬಳ್ಳಿ ಧಾರವಾಡ ಅವಳಿ ನಗರವನ್ನು ಸಂಪರ್ಕಿಸಿರುವ ತ್ವರಿತ ಬಸ್ ಸಂಚಾರ ವ್ಯವಸ್ಥೆಯ ಬಿಆರ್‌ಟಿಎಸ್‌ನ ‘ಚಿಗರಿ’ ಮಾರ್ಗದಲ್ಲಿ ಶುಕ್ರವಾರ ನಿಜ ಚಿಗರಿಯೊಂದು ಓಡಿದ್ದು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.

‘ಚಿಗರಿ’ ಬಸ್ ಅಥವಾ ಸರ್ಕಾರಿ ಕಾರುಗಳನ್ನು ಹೊರತುಪಡಿಸಿ ಬೇರೆ ಏನನ್ನೂ ನೋಡಲು ಸಾಧ್ಯವಿಲ್ಲದ ಬಿಆರ್‌ಟಿಎಸ್ ಮಾರ್ಗದಲ್ಲಿ ಕಂಡುಬಂದ ಚಿಗರಿಯ ನಾಗಾಲೋಟದ ಓಟವನ್ನು ಸೆರೆಹಿಡಿಯಲು ದ್ವಿಚಕ್ರವಾಹನ ಸವಾರರು ಪೈಪೋಟಿ ನಡೆಸಿ ಕಡೆಗೂ ಚಿಗರಿಯ ಓಟಕ್ಕೆ ಶರಣಾಗಿದ್ದಾರೆ.

ಹುಬ್ಬಳ್ಳಿ ಧಾರವಾಡ ನಡುವಿನ ಸತ್ತೂರು ಬಳಿಯ ಸಂಜೀವಿನ ಉದ್ಯಾನ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶದಿಂದ ಈ ಚಿಗರಿ ರಸ್ತೆಗೆ ಬಂದಿರಬಹುದು ಎಂದು ಸ್ಥಳೀಯರು ಹೇಳಿದರು. ಆಕಸ್ಮಿಕವಾಗಿ ರಸ್ತೆಗಿಳಿದ ಚಿಗರಿ ಭಯದಿಂದ ವೇಗವಾಗಿ ಓಡಿತು. ಚಿಗರಿಯ ಓಟ ಕಂಡ ಹಲವರು ನಿಂತು ಮೊಬೈಲ್‌ನಲ್ಲಿ ದಾಖಲಿಸಿಕೊಳ್ಳಲು ಸಿದ್ಧತೆ ನಡೆಸುವ ಹೊತ್ತಿಗೆ ಚಿಗರಿ ಮಿಂಚಿ ಮರೆಯಾಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ‘ಚಿಗರಿ ಬಹಳಾ ನಾಚಿಕೆ ಪ್ರಾಣಿ. ಅವಳಿ ನಗರದ ನಡುವೆ ಕಂಡುಬಂದಿದ್ದು ವನ್ಯಜೀವಿಗಳು ಸುರಕ್ಷಿತವಾಗಿವೆ ಎನ್ನುವುದಕ್ಕೆ ಉತ್ತಮ ಉದಾಹರಣೆ. ಚಿಗರಿ ಸುರಕ್ಷಿತವಾಗಿ ಅರಣ್ಯಕ್ಕೆ ಮರಳಿರುವ ಮಾಹಿತಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.