ಧಾರವಾಡ: ‘ಸರ್ಕಾರಿ ಶಾಲಾ ಶಿಕ್ಷಕರಿಗೆ ಪಠ್ಯೇತರ ಚಟುವಟಿಕೆ ಹೊರೆ ತಪ್ಪಿಸಲು ಕ್ರಮವಹಿಸಲಾಗುವುದು. ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆ ನಿಟ್ಟಿನಲ್ಲಿ ಶಿಕ್ಷಕರು ಎದುರಿಸುವ ಸಮಸ್ಯೆ ಪರಿಹರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ‘ಮಿಷನ್ ವಿದ್ಯಾಕಾಶಿ’ ಯೋಜನೆ, ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮತ್ತು ಶಿಕ್ಷಕರ ಸಮಸ್ಯೆಗಳ ಪರಿಹಾರ ಕುರಿತು ಸಭೆಯಲ್ಲಿ ಮಾತನಾಡಿದರು.
ಮಿಷನ್ ವಿದ್ಯಾಕಾಶಿ ಯೋಜನೆಯಲ್ಲಿ ಕಳೆದ ವರ್ಷದ ಸಾಧನೆ ಅಪೇಕ್ಷಿತ ಮಟ್ಟದಲ್ಲಿ ಇಲ್ಲ. ಪ್ರಾಥಮಿಕ, ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಮೂಲ ಶಿಕ್ಷಣ ದೊರೆಯದಿರುವುದು ಕಾರಣ ಎಂದರು.
ಬಿಸಿಯೂಟ ಪೂರೈಸುವ ಏಜೆನ್ಸಿ ಮೂಲಕವೇ ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಲು ಅಥವಾ ಅದಕ್ಕಾಗಿ ಬೇರೆ ಏಜೆನ್ಸಿ ನೇಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕ್ರಮವಹಿಸುವಂತೆ ಡಿಡಿಪಿಐಗೆ ತಿಳಿಸಿದರು.
ಮಕ್ಕಳ ಹಾಜರಾತಿ, ಮೊಟ್ಟೆ, ಹಾಲು ವಿತರಣೆ ಮಾಹಿತಿಯನ್ನು ಒಂದೇ ಆ್ಯಪ್‍ನಲ್ಲಿ ದಾಖಲಿಸುವಂತೆ ವ್ಯವಸ್ಥೆ ಮಾಡಲಾಗುವುದು. ಆನ್‍ಲೈನ್ ಹಾಗೂ ತಾಂತ್ರಿಕ ಕಾರ್ಯಗಳಿಗಾಗಿ ಶಿಕ್ಷಕರ ನೆರವಿಗೆ ಕ್ಲಸ್ಟರ್‌ಮಟ್ಟದಲ್ಲಿ ತಾಂತ್ರಿಕ ಸಿಬ್ಬಂದಿಯೊಬ್ಬರನ್ನು ತಾತ್ಕಾಲಿಕವಾಗಿ ನಿಯೋಜಿಸಲು ಚಿಂತನೆ ನಡೆದಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ ಮಾತನಾಡಿ, ತಾವು ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಮೂಲಸೌಕರ್ಯ, ಶೈಕ್ಷಣಿಕ ಗುಣಮಟ್ಟ, ಮಕ್ಕಳ ಮತ್ತು ಶಿಕ್ಷಕರ ಹಾಜರಾತಿ, ಅಭಿವೃದ್ದಿ ಕಾರ್ಯಗಳನ್ನು ಪರಿಶೀಲಿಸಲಾಗುವುದು. ಶಿಕ್ಷಕರಿಗೆ ಪಠ್ಯಕ್ರಮ, ಬೋಧನೆ ಆದ್ಯತೆ ಆಗಬೇಕು. ಈ ವರ್ಷ ಗುರಿ ಸಾಧಿಸಬೇಕು ಎಂದರು.
ಡಿಡಿಪಿಐ ಎಸ್.ಎಸ್.ಕೆಳದಿಮಠ, ಹಿಂದುಳಿದ ಕಲ್ಯಾಣ ಇಲಾಖೆ ಉಪನಿದೇಶಕ ಗಂಗಾಧರ ದೊಡಮನಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭಾ. ಪಿ., ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ಜಿಲ್ಲಾ ವಕ್ಫ್ ಅಧಿಕಾರಿ ತಾಜುದ್ದೀನ್ ಶೆಖ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.