ಕಲಘಟಗಿ: ಪಟ್ಟಣದ ಖಾಸಗಿ ಮಾರಾಟ ಮಳಿಗೆಯೊಂದರಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಇದ್ದರೂ ತಾಂತ್ರಿಕದೋಷದ ನೆಪವೊಡ್ಡಿ ರಸಗೊಬ್ಬರ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ರೈತರು ರಾಷ್ಟ್ರೀಯ ಹೆದ್ದಾರಿ-63 ತಡೆದು ಶನಿವಾರ ಪ್ರತಿಭಟನೆ ನಡೆಸಿದರು.
ಕಳೆದ ಎಂಟು ದಿನಗಳಿಂದ ಪ್ರತಿನಿತ್ಯ ತಾಲ್ಲೂಕಿನ ರೈತ ವರ್ಗದವರು ಸರದಿ ಸಾಲಿನಲ್ಲಿ ನಿಂತರೂ ಯೂರಿಯಾ ಗೊಬ್ಬರ ಸಮರ್ಪಕವಾಗಿ ಸಿಗುತ್ತಿಲ್ಲ. ರೈತರಿಗೆ ಯೂರಿಯಾ ಗೊಬ್ಬರ ನೀಡದೆ ತಾಂತ್ರಿಕದೋಷದ ನೆಪ ಹೇಳಿ ಮಳಿಗೆ ಬಂದ ಮಾಡುತ್ತಿದ್ದಾರೆ ಮಳಿಗೆಯಲ್ಲಿ ಗೊಬ್ಬರ ದಾಸ್ತಾನು ಇದ್ದರು ನೀಡುತ್ತಿಲ್ಲ ಆಕ್ರೋಶ ವ್ಯಕ್ತ ಪಡಿಸಿದರು.
ವಿವಿಧ ಸೊಸೈಟಿ, ಸಹಕಾರಿ ಸಂಘ, ಮಾರುಕಟ್ಟೆಗಳಲ್ಲಿ ನಾಳೆ, ನಾಡಿದ್ದು ಬರುತ್ತದೆ ಎಂದು ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಕೆಲಕಾಲ ತಡೆದು ಪ್ರತಿಭಟನೆಗಿಳಿದರು.
ಇಷ್ಟಕ್ಕೆ ಸುಮ್ಮನಾಗದ ಕೃಷಿಕರು ಅಂಗಡಿ ಮಾಲೀಕರು, ಕೃಷಿ ಇಲಾಖೆಯ ಸಂಬಂಧಪಟ್ಟವರು ಕೂಡಲೇ ಸ್ಥಳಕ್ಕೆ ಆಗಮಿಸಬೇಕು. ಬಂದ್ ಮಾಡಿದ ಮಳಿಗೆಯನ್ನು ಕೂಡಲೇ ಪ್ರಾರಂಭಿಸಿ ರೈತರಿಗೆ ಯೂರಿಯಾ ಗೊಬ್ಬರ ವಿತರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಂಗಾರು ಬಿತ್ತನೆಯಾದ ಬಳಿಕ ಪ್ರತಿವರ್ಷ ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರದ ಸಮಸ್ಯೆ ಉಲ್ಬಣಗೊಂಡರು ಶಾಶ್ವತ ಪರಿಹಾರ ಸಿಗುತ್ತಿಲ್ಲ. ಎಷ್ಟು ಮೆಟ್ರಿಕ್ ಟನ್ ಯೂರಿಯಾ ಬೇಕು ಅನ್ನುವುದನ್ನು ಮುಂಚಿತವಾಗಿ ಮೇಲಧಿಕಾರಿಗಳಿಗೆ ತಿಳಿಸುತ್ತಿಲ್ಲ. ಖಾಸಗಿ ಗೊಬ್ಬರ ಮಳಿಗೆಯಲ್ಲಿ ಗೊಬ್ಬರ ಇದ್ದರು ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟವಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಪ್ರತಿಭಟನೆಯಿಂದ ಕೆಲಕಾಲ ಪ್ರಯಾಣಿಕರು, ವಾಹನ ಸವಾರರು ಸಂಚಾರಕ್ಕೆ ಹರಸಹಾಸ ಪಡುವಂತಾಯಿತು. ರಸ್ತೆ ಬಂದ್ ಆದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ರೈತರನ್ನು ಮನವೊಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.