ADVERTISEMENT

ಸೌಕರ್ಯ ವಂಚಿತ ಸೂಪರ್ ಮಾರುಕಟ್ಟೆ

ಚಾವಣಿ, ಸಂತೆ ಕಟ್ಟೆ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಪ್ರತ್ಯೇಕ ಶೌಚಾಲಯ ಕಟ್ಟ‌ಡಕ್ಕೆ ಮೊರೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 5:34 IST
Last Updated 7 ಆಗಸ್ಟ್ 2025, 5:34 IST
ಧಾರವಾಡದ ಸೂಪರ್ ಮಾರುಕಟ್ಟೆ 
ಧಾರವಾಡದ ಸೂಪರ್ ಮಾರುಕಟ್ಟೆ    

ಧಾರವಾಡ: ನಗರದ ಗಾಂಧಿ ಚೌಕ ಬಳಿಯ ಸೂಪರ್ ಮಾರುಕಟ್ಟೆಯಲ್ಲಿ ಚಾವಣಿ, ಸಂತೆಕಟ್ಟೆ ಸೌಕರ್ಯ ಇಲ್ಲ. ವ್ಯಾಪಾರಿಗಳು ನೆಲದಲ್ಲೇ ಪದಾರ್ಥಗಳನ್ನು ಇಟ್ಟು ಬಿಸಿಲು, ಮಳೆ, ಗಾಳಿ, ದೂಳಿನಲ್ಲಿ ಮಾರುವ ಸ್ಥಿತಿ ಇದೆ.

ಈ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳ ಕೊರತೆಯಿಂದಾಗಿ ವರ್ತಕರು, ಗ್ರಾಹಕರಿಗೆ ಬವಣೆ ತಪ್ಪಿಲ್ಲ. ರಭಸವಾಗಿ ಮಳೆಯಾದಾಗ ಪದಾರ್ಥಗಳು ನೀರುಪಾಲಾಗದಂತೆ ತಡೆಯಲು ವ್ಯಾಪಾರಿಗಳು ಹೆಣಗಾಡಬೇಕು. ಇನ್ನು ಬೇಸಿಗೆಯಲ್ಲಿ ಬಿಸಿಲಿಗೆ ಸೊಪ್ಪು, ತರಕಾರಿಗಳು ಬಾಡದಂತೆ ತಾಜಾವಾಗಿ ಕಾಪಾಡಿಕೊಳ್ಳುವುದು ದೊಡ್ಡ ಸವಾಲು.

ಕೆಲವು ವ್ಯಾಪಾರಿಗಳು ತಾಡಪತ್ರಿ ಆಶ್ರಯದಲ್ಲಿ, ಇನ್ನು ಕೆಲವರು ಛತ್ರಿ ಆಸರೆಯಲ್ಲಿ ವ್ಯಾಪಾರ ಮಾಡುತ್ತಾರೆ. ಜಾಗದ ಸಮಸ್ಯೆಯಿಂದ ಕೆಲವರು ಚರಂಡಿ ಪಕ್ಕದಲ್ಲಿಯೇ ವಹಿವಾಟು ನಡೆಸುತ್ತಾರೆ.

ADVERTISEMENT

ಮಾರುಕಟ್ಟೆಯಲ್ಲಿ ನೆರಳಿಗೆ ಶೆಡ್ ನಿರ್ಮಿಸುವಂತೆ ಹಲವು ಬಾರಿ ಪಾಲಿಕೆಯವರಿಗೆ ಮನವಿ ಸಲ್ಲಿಸಿದರೂ ಕ್ರಮ ವಹಿಸಿಲ್ಲ ಎಂದು ಬೀದಿಬದಿ ವ್ಯಾಪಾರಸ್ಥರ ಒಕ್ಕೂಟದ ಅಧ್ಯಕ್ಷ ಅಜಮತ್ ಖಾನ್‌ ಪಠಾಣ್‌ ಬೇಸರ ವ್ಯಕ್ತಪಡಿಸಿದರು.

ಇದು ನಗರದ ಪ್ರಮುಖ ಮಾರುಕಟ್ಟೆ. ತಗ್ಗು ಪ್ರದೇಶದಲ್ಲಿದೆ. ಮಳೆಯಾದಾಗ ನೀರು ಆವರಿಸುತ್ತದೆ. ಸದಾ ಜನಜಂಗುಳಿ ಇರುತ್ತದೆ. ನೆಲಹಾಸಿನಲ್ಲಿ ಇಂಟರ್‌ ಲಾಕಿಂಗ್ ಸಿಮೆಂಟ್ ಇಟ್ಟಿಗೆ ಅಳವಡಿಸಲಾಗಿದೆ. 500ಕ್ಕೂ ಹೆಚ್ಚು ವ್ಯಾಪಾರಸ್ಥರು ಇದ್ದಾರೆ. ತರಕಾರಿ, ಹಣ್ಣು, ಹೂವು, ದಿನ ಬಳಕೆ ವಸ್ತುಗಳ ಮಾರಾಟ ನಡೆಯುತ್ತದೆ. ಕಿರಾಣಿ ಅಂಗಡಿಗಳು ಇವೆ. ನಗರ ಮತ್ತು ಸುತ್ತಲಿನ ಊರುಗಳ ಜನರು ವಸ್ತುಗಳನ್ನು ಖರೀದಿಸುತ್ತಾರೆ. ವಾರದ ಸಂತೆ ಮಂಗಳವಾರ ನಡೆಯುತ್ತದೆ.

ಮಾರುಕಟ್ಟೆಗೆ ಸುತ್ತ ಕಾಂಪೌಂಡ್‌ ‌ಇಲ್ಲ. ಮಾರುಕಟ್ಟೆಯಲ್ಲಿ ಬೀಡಾಡಿ ಜಾನುವಾರುಗಳು, ಹಂದಿಗಳು, ಬೀದಿನಾಯಿಗಳು ಹಾವಳಿ ಇದೆ. ಬೀಡಾಡಿ ರಾಸುಗಳಿಂದ ಪದಾರ್ಥಗಳನ್ನು ಕಾಪಾಡಿಕೊಳ್ಳುವುದೂ ವ್ಯಾಪಾರಿಗಳು ಸವಾಲಾಗಿದೆ. ನಿಗಾ ಇಡದಿದ್ದರೆ ಹಣ್ಣು, ತರಕಾರಿ, ಸೊಪ್ಪುಗಳು ರಾಸುಗಳ ಪಾಲಾಗುತ್ತವೆ.

ಮಾರುಕಟ್ಟೆಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಒಂದು ಪಾವತಿ ಶೌಚಾಲಯವಿದೆ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಕಟ್ಟಡ, ವಿಶ್ರಾಂತಿ ಕೊಠಡಿ ನಿರ್ಮಿಸಬೇಕು ಎಂಬ ಬೇಡಿಕೆ ಇದೆ.

ವಾಹನ ಅಡ್ಡಾದಿಡ್ಡಿ ನಿಲುಗಡೆ; ಸಂಚಾರ ಸಂಕಷ್ಟ

ಸಿಬಿಟಿ ನೆಹರು ರಸ್ತೆ ಅಕ್ಕಿಪೇಟೆ ಸುಭಾಸ ರಸ್ತೆಯಲ್ಲೇ ತರಕಾರಿ ಹಣ್ಣು ಹೂವು ಮುಂತಾದವುಗಳ ವ್ಯಾಪಾರ ನಡೆಯುತ್ತದೆ. ಕೆಲವರು ರಸ್ತೆ ಬದಿ ಮತ್ತು ಮಧ್ಯದಲ್ಲೇ ವ್ಯಾಪಾರ ಮಾಡುತ್ತಾರೆ. ರಸ್ತೆ ಬದಿಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಜನಜಂಗುಳಿಯ ಪ್ರದೇಶ ಇದು. ಗ್ರಾಹಕರು ವಾಹನಗಳ ಓಡಾಟ ಪಡಿಪಾಟಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.