ಧಾರವಾಡ: ‘ಜಿಲ್ಲೆಯಲ್ಲಿ 1,622 ಅಂಗನವಾಡಿ ಕೇಂದ್ರಗಳಿದ್ದು, ಸುಮಾರು 95,118 ಮಕ್ಕಳಿದ್ದಾರೆ. ಎಲ್ಲ ಕೇಂದ್ರಗಳಲ್ಲಿ ಒಆರ್‌ಎಸ್ ಕಾರ್ನರ್ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ ಯಶಸ್ವಿಯಾಗಿ ಆಯೋಜಿಸುವ ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನದಡಿ ಜಿಲ್ಲೆಯಲ್ಲಿ ಐದು ವರ್ಷದವರೆಗಿನ ಮಕ್ಕಳಿಗೆ ಒಆರ್‌ಎಸ್ ನೀಡಲಾಗುತ್ತಿದೆ. ತೀವ್ರ ಅತಿಸಾರದಿಂದ ಮಕ್ಕಳ ಮರಣವನ್ನು ಶೂನ್ಯಕ್ಕೆ ತರುವುದು ಈ ಅಭಿಯಾನದ ಉದ್ದೇಶವಾಗಿದೆ’ ಎಂದು ಹೇಳಿದರು.
‘ಎಸ್‍ಡಿಎಂ, ಹುಬ್ಬಳ್ಳಿ ಕೆಎಂಸಿ–ಆರ್‌ಐ ಮಕ್ಕಳ ವಿಭಾಗ ಮತ್ತು ಸಮುದಾಯ ಆರೋಗ್ಯ ವಿಭಾಗದವರು ಅಭಿಯಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು’ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ ಮಾತನಾಡಿ, ‘ಅತಿಸಾರದಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ವ್ಯವಸ್ಥೆಯು ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿದೆ’ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ.ಹೊನಕೇರಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸುಜಾತಾ ಹಸವೀಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.