ADVERTISEMENT

ಡಿಜಿ ಫೋಟೊ ಎಕ್ಸ್‌ಪೊ 22ರಿಂದ

ಛಾಯಾಗ್ರಾಹಕರಿಗೆ ಹೊಸ ತಂತ್ರಜ್ಞಾನ ಪರಿಚಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:00 IST
Last Updated 20 ಫೆಬ್ರುವರಿ 2020, 20:00 IST

ಹುಬ್ಬಳ್ಳಿ: ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮತ್ತು ಮೇಳ ‘ಡಿಜಿ ಎಕ್ಸ್‌ಪೊ’ ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ವಾಸವಿ ಮಹಲ್‌ನಲ್ಲಿ ಇದೇ 22 ಮತ್ತು 23ರಂದು ನಡೆಯಲಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಹುಬ್ಬಳ್ಳಿ ಫೋಟೊಗ್ರಾಫರ್ಸ್‌ ಮತ್ತು ವಿಡಿಯೊಗ್ರಾಫರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಕಿರಣ್ ಬಾಕಳೆ, ಕರ್ನಾಟಕ ವಿಡಿಯೊಗ್ರಾಫರ್ಸ್ ಮತ್ತು ಫೋಟೊಗ್ರಾಫರ್ಸ್ ಅಸೋಸಿಯೇಷನ್ (ಕೆವಿಪಿಎ), ಬೈಸೆಲ್ ಇಂಟರ‍್ಯಾಕ್ಷನ್ ಸಂಸ್ಥೆಯ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗಿದೆ. ಫೋಟೊ ಹಾಗೂ ವಿಡಿಯೊಗ್ರಫಿಗೆ ಸಂಬಂಧಿಸಿದಂತೆ ವಿವಿಧ ಕ್ಯಾಮೆರಾ ತಯಾರಿಕಾ ಕಂಪನಿಗಳ ಹಾಗೂ ಫೋಟೊ ಲ್ಯಾಬ್‌ಗಳ ಒಟ್ಟು 70 ಮಳಿಗೆಗಳು ಇರುವುದು ವಿಶೇಷತೆಯಾಗಿದೆ ಎಂದರು.

22ರಂದು ಬೆಳಿಗ್ಗೆ ಹತ್ತು ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಶಾಸಕ ಪ್ರಸಾದ್ ಅಬ್ಬಯ್ಯ, ನಟ– ನಿರ್ದೇಶಕ ಯಶವಂತ ಸರದೇಶಪಾಂಡೆ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ADVERTISEMENT

ಹೊಸ ತಂತ್ರಜ್ಞಾನವನ್ನು ಸ್ಥಳೀಯರಿಗೆ ಪರಿಚಯಿಸುವುದು. ಕಾರ್ಯಾಗಾರದ ಮೂಲಕ ಹೊಸ ವಿಷಯಗಳನ್ನು ತಿಳಿಸಿಕೊಡುವುದು ಮುಖ್ಯ ಉದ್ದೇಶವಾಗಿದೆ. ಈ ಹಿಂದೆ ಆಯೋಜಿಸಿದ್ದ ಎರಡು ಎಕ್ಸ್‌ಪೊಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದ್ದರಿಂದ ಮೂರನೇ ಎಕ್ಸ್‌ಪೊವನ್ನು ಆಯೋಜಿಸಲಾಗಿದ್ದು, ಈ ಬಾರಿಯೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಗುವ ವಿಶ್ವಾಸ ಇದೆ ಎಂದು (ಕೆವಿಪಿಎ) ಉಪಾಧ್ಯಕ್ಷ ಕೃಷ್ಣಪ್ಪ ಹೇಳಿದರು.

ಉತ್ತರ ಕರ್ನಾಟಕದ ಎಲ್ಲ ಛಾಯಾಗ್ರಾಹಕರು ಹಾಗೂ ವಿಡಿಯೊಗ್ರಾಫರ್ಸ್‌ಗಳು ಈ ಪ್ರದರ್ಶನದ ಲಾಭ ಪಡೆದುಕೊಳ್ಳಬೇಕು ಎಂದು ಕೆವಿಪಿಎ ಅಧ್ಯಕ್ಷ ಬೆಂಜಿಮಿನ್ ಭಾಸ್ಕರ ಮನವಿ ಮಾಡಿದರು.

ಬೈಸೆಲ್ ಇಂಟರ‍್ಯಾಕ್ಷನ್ ಸಂಸ್ಥೆಯ ಈವೆಂಟ್ ಮ್ಯಾನೇಜರ್ ಬಾಲಸುಬ್ರಮಣಿಯನ್, ದಿನೇಶ್ ದಾಬಡೆ, ಜಯೇಶ್ ಇರಕಲ್, ಅನಿಲ್ ತುರಮರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.