ADVERTISEMENT

ಪ್ರಯಾಣಿಕರ ಸೆಳೆಯಲು ರಿಯಾಯಿತಿ ಮೊರೆ

ಲಾಕ್‌ಡೌನ್‌ನಿಂದ ರದ್ದಾಗಿದ್ದ ದೈನಂದಿನ, ಮಾಸಿಕ ಬಸ್‌ ಪಾಸ್‌ಗಳ ವಿತರಣೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 16:41 IST
Last Updated 13 ಸೆಪ್ಟೆಂಬರ್ 2020, 16:41 IST

ಹುಬ್ಬಳ್ಳಿ: ಲಾಕ್‌ಡೌನ್‌ ತೆರವಾಗಿ ಬಸ್ ಸಂಚಾರ ಆರಂಭವಾದರೂ ಬಸ್‌ಗಳಲ್ಲಿ ಮೊದಲಿನ ಹಾಗೆ ಪ್ರಯಾಣಿಕರು ಬರುತ್ತಿಲ್ಲ. ಆದ್ದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜನರನ್ನು ಸೆಳೆಯಲು ತನ್ನ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ದೈನಂದಿನ ಹಾಗೂ ಮಾಸಿಕ ಪಾಸ್‌ಗಳನ್ನು ರಿಯಾಯಿತಿ ದರದಲ್ಲಿ ನೀಡುವ ಯೋಜನೆ ಪುನರಾರಂಭಿಸಿದೆ.

ಕೋವಿಡ್‌ ಪೂರ್ವದಲ್ಲಿ ರಿಯಾಯಿತಿ ದರದಲ್ಲಿ ಪಾಸ್‌ ನೀಡಲಾಗುತ್ತಿತ್ತು. ಲಾಕ್‌ಡೌನ್‌ ತೆರವಾದ ಆರಂಭದ ಕೆಲ ತಿಂಗಳ ಕಾಲ ಪಾಸ್ ನೀಡಿರಲಿಲ್ಲ. ಈಗ ಈ ಸಾರಿಗೆ ಸಂಸ್ಥೆ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪಾಸ್‌ ನೀಡಿ ನಷ್ಟ ಕಡಿಮೆ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಪಾಸ್ ನೀಡಲಾಗುತ್ತದೆ. ಬೇರೆ ಜಿಲ್ಲೆಗಳಲ್ಲಿ ಒಂದೆರೆಡು ದಿನಗಳಲ್ಲಿ ಆರಂಭವಾಗಲಿದೆ.

ರಿಯಾಯಿತಿ ದರದ ಮಾಸಿಕ ಪಾಸ್‌ಗಳನ್ನು ಪಡೆದರೆ ಪ್ರಯಾಣಿಕರಿಗೆ ಹಣ ಉಳಿತಾಯವಾಗುತ್ತದೆ. ಕೋವಿಡ್‌ ಕಾಲದಲ್ಲಿ ನಗದು ವಹಿವಾಟು ತಪ್ಪಿಸಲು ಸಾಧ್ಯವಾಗುತ್ತದೆ. ಎಷ್ಟೇ ಪ್ರಯಾಣಿಕರಿದ್ದರೂ ಬಸ್‌ಗಳನ್ನು ನಿಗದಿತ ಮಾರ್ಗದಲ್ಲಿ ಓಡಿಸಲೇಬೇಕಾಗಿದೆ. ಆದ್ದರಿಂದ ಪಾಸ್‌ಗಳನ್ನು ನೀಡಿದರೆ ಸಂಸ್ಥೆಗೆ ಒಂದಷ್ಟು ನಿಶ್ಚಿತ ಆದಾಯ ಬರುತ್ತದೆ. ಇದಲ್ಲದೆ ತಮ್ಮ ಜಿಲ್ಲೆಗಳಿಂದ ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಗಿಬರುವ ಶಿಕ್ಷಕರು, ಬ್ಯಾಂಕ್‌ ಉದ್ಯೋಗಿಗಳಿಗೆ ರಿಯಾಯಿತಿ ಪಾಸ್‌ನಿಂದ ಹೆಚ್ಚಿನ ಲಾಭ ಸಿಗುತ್ತದೆ.

ADVERTISEMENT

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚು ಪ್ರಯಾಣಿಕರು ಸಂಚರಿಸುವ ಮಾರ್ಗದಲ್ಲಿ ನಿಗದಿತ ಹಾಗೂ ವೇಳಾಪಟ್ಟಿಗಿಂತಲೂ ಹೆಚ್ಚಿನ ಬಸ್‌ಗಳನ್ನು ಓಡಿಸುತ್ತಿದೆ. ಕಡಿಮೆ ಪ್ರಯಾಣಿಕರು ಸಂಚರಿಸುವ ಮಾರ್ಗದಲ್ಲಿ ಟ್ರಿಪ್‌ಗಳನ್ನು ಕಡಿಮೆ ಮಾಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ‘ರಿಯಾಯಿತಿ ದರದಲ್ಲಿ ಪಾಸ್‌ಗಳನ್ನು ಪಡೆದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ನಗದು ರಹಿತ ವಹಿವಾಟು ಸಾಧ್ಯವಾಗುತ್ತದೆ. ಸಂಸ್ಥೆಗೆ ನಿಶ್ಚಿತ ಆದಾಯ ಕೂಡ ಬರುತ್ತದೆ. ಇದು ಕೋವಿಡ್‌ ತಡೆಗಟ್ಟಲು ಸಹಕಾರಿ’ ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಕ ಸಂತೋಷ ಕುಮಾರ್‌ ‘ಕೋವಿಡ್‌ ಪೂರ್ವದಲ್ಲಿ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ 4,670 ಬಸ್‌ಗಳು ಸಂಚರಿಸುತ್ತಿದ್ದವು. ಈಗ 3,100 ಬಸ್‌ಗಳ ಸಂಚಾರವಿದ್ದು ಸಂಸ್ಥೆಗೆ ನಿತ್ಯ ₹2.2 ಕೋಟಿ ಆದಾಯ ಬರುತ್ತಿದೆ. ಮೊದಲು ಒಂದು ದಿನಕ್ಕೆ ₹5 ಕೋಟಿ ಆದಾಯ ಬರುತ್ತಿತ್ತು. ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಬಸ್ ಸಂಚಾರ ಆರಂಭವಾದರೆ ಆದಾಯ ಹೆಚ್ಚಳವಾಗುವ ನಿರೀಕ್ಷೆಯಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ರಿಯಾಯಿತಿ ದರದಲ್ಲಿ ಮಾಸಿಕ ಪಾಸ್‌ಗಳನ್ನು ನೀಡಲು ಎಲ್ಲಾ ಜಿಲ್ಲೆಗಳ ಡಿ.ಸಿಗಳಿಗೆ ಸೂಚಿಸಿದ್ದೇನೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲು ತಿಳಿಸಿದ್ದೇನೆ.
ಎ.ಎಸ್‌. ಪಾಟೀಲ
ಅಧ್ಯಕ್ಷರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.