ADVERTISEMENT

ಚಿಟಗುಪ್ಪಿ ಆಸ್ಪತ್ರೆ; ಅತ್ಯಾಧುನಿಕ ಚಿಕಿತ್ಸೆ

ಬಡ ರೋಗಿಗಳಿಗೆ ಆಪದ್ಭಾಂಧವ ಡಾ. ಶ್ರೀಧರ ಡಂಡಪ್ಪನವರ

ನಾಗರಾಜ ಬಿ.ಎನ್‌.
Published 1 ಜುಲೈ 2025, 7:00 IST
Last Updated 1 ಜುಲೈ 2025, 7:00 IST
ಡಾ. ಶ್ರೀಧರ ದಂಡಪ್ಪನವರ
ಡಾ. ಶ್ರೀಧರ ದಂಡಪ್ಪನವರ   

ಪ್ರಜಾವಾಣಿ ವಾರ್ತೆ

ಹುಬ್ಬಳ್ಳಿ: ಶತಮಾನದಷ್ಟು ಹಳೆಯ (130 ವರ್ಷ) ಹುಬ್ಬಳ್ಳಿ ಕೇಂದ್ರ ಭಾಗದಲ್ಲಿರುವ ಚಿಟಗುಪ್ಪಿ ಆಸ್ಪತ್ರೆ, ಬಡವರ ಪಾಲಿನ ಸಂಜೀವಿನಿಯಾಗಿದೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಈ ಆಸ್ಪತ್ರೆ, ಸ್ಮಾರ್ಟ್‌ ಸಿಟಿ ಯೋಜನೆಯಡಿ ನವೀಕರಣಗೊಂಡು, ಅತ್ಯಾಧುನಿಕ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ.

ಹಳೇಹುಬ್ಬಳ್ಳಿ, ಸಿಬಿಟಿ, ಕಮರಿಪೇಟೆ, ಕೇಶ್ವಾಪುರ, ಗೋಪನಕೊಪ್ಪ ಸೇರಿ ಇತರೆಡೆಯ ಬಡ ವರ್ಗದ ಜನರು ಆರೋಗ್ಯಕ್ಕಾಗಿ ಬಹುತೇಕ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಹೆರಿಗೆಗೆ ಪ್ರಸಿದ್ಧಿಯಾಗಿರುವ ಈ ಆಸ್ಪತ್ರೆಯಲ್ಲಿ, 2023 ರಿಂದ ಈವರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಸಾಮಾನ್ಯ ಹೆರಿಗೆಯಾಗಿವೆ. ತಾಯಿ–ಮಗು ಮೃತಪಟ್ಟ ಪ್ರಕರಣ ಒಂದೇ ಒಂದು ಸಹ ಇಲ್ಲದಿರುವುದು ಆಸ್ಪತ್ರೆಯ ಹಾಗೂ ಇಲ್ಲಿಯ ವೈದ್ಯರ ಹೆಗ್ಗಳಿಕೆ.

ADVERTISEMENT

ಪಾಲಿಕೆ ಅನುದಾನದಲ್ಲಿ ಆಸ್ಪತ್ರೆ ನಿರ್ವಹಣೆಯಾಗುತ್ತಿದೆಯಾದರೂ, ಸಾಕಷ್ಟು ದಾನಿಗಳು ವೈದ್ಯಕೀಯ ಉಪಕರಣವನ್ನು ನೀಡಿ ಬಡರೋಗಿಗಳ ಪಾಲಿಕೆ ನೆರವಾಗುತ್ತಿದ್ದಾರೆ. ಎರಡು ವರ್ಷದಲ್ಲಿ ಸುಮಾರು ₹2 ಕೋಟಿಗೂ ಹೆಚ್ಚಿನ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ದಾನಿಗಳಿಂದ ಪಡೆಯಲಾಗಿದೆ.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಶ್ರೀಧರ ದಂಡಪ್ಪನವರ ಅವರು, ಹುಬ್ಬಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ ವಿಜಯಪುರದ ಬಿಎಲ್‌ಡಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್‌ ಮುಗಿಸಿದ್ದಾರೆ. ನಂತರ ಮುಂಬೈನಲ್ಲಿ ಎಫ್‌ಎಂಎಎಸ್‌ ಪದವಿ ಪಡೆದು, ದೇಶದ ಪ್ರತಿಷ್ಠಿತ ಆಸ್ಪತ್ರೆಯಾದ ಮುಂಬೈನ ಲೀಲಾವತಿ ಮತ್ತು ಬ್ರಿಡ್ಜ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಮುಖ ಸರ್ಜನ್‌ ಸಹ ಇವರಾಗಿದ್ದಾರೆ.

‘ನಾನು ಹುಟ್ಟಿ ಬೆಳೆದ ಊರಿನಲ್ಲಿಯೇ ಸರ್ಕಾರಿ ವೈದ್ಯನಾಗಿ ಬಡವರ ಸೇವೆ ಮಾಡಬೇಕು ಎನ್ನುವುದು ಹೆತ್ತವರ ಆಸೆಯಾಗಿತ್ತು. ಪಾಲಿಕೆ ಆಸ್ಪತ್ರೆಯಲ್ಲಿ ಅವಕಾಶ ಸಿಕ್ಕಿದ್ದು, ವೈದ್ಯನಾಗಿ ಬಡ ರೋಗಿಗಳ ಸೇವೆ ಮಾಡುತ್ತಿದ್ದೇನೆ. ಬಾಲ್ಯದ ದಿನಗಳಲ್ಲಿ ಕೇಶ್ವಾಪುರದ ಸುತ್ತಮುತ್ತ ಇರುವ ಬಡವರು, ಆಸ್ಪತ್ರೆಗೆ ಹೋಗಲು ಹಣವಿಲ್ಲದೆ ಪರದಾಡುತ್ತಿರುವುದನ್ನು ನೋಡಿದ್ದೆ. ಮಾತ್ರೆ ಖರೀದಿಸಲು ಸಹ ಅವರಲ್ಲಿ ಹಣವಿರುತ್ತಿರಲಿಲ್ಲ. ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಯಾಗಬೇಕು. ದಾನ ನೀಡಲು ಸಾಕಷ್ಟು ಮಂದಿ ಇದ್ದಾರೆ. ಅವರನ್ನು ಮನವೊಲಿಸುವ ಕೆಲಸ ನಮ್ಮಿಂದಾಗಬೇಕು’ ಎಂದು ಡಾ. ಶ್ರೀಧರ ದಂಡಪ್ಪನವರ ಹೇಳುತ್ತಾರೆ.

‘ಆರೋಗ್ಯ ಎನ್ನುವುದು ನಂಬಿಕೆಯ ಕೊನೆಯ ದೀಪ. ಈ ದೀಪ ನಂದಿದ ದಿನ, ನಾವೆಲ್ಲ ಕತ್ತಲೆಯಲ್ಲಿ ಮುಳುಗುತ್ತೇವೆ. ಈ ದೀಪವನ್ನು ಉಳಿಸಲು, ಬೆಳಗಿಸಲು ವೈದ್ಯರಾದವರು ನಿರಂತರ ಶ್ರಮಿಸುತ್ತಿರುತ್ತಾರೆ. ಎಷ್ಟೋ ರೋಗಿಗಳು ವೈದ್ಯರ ಫೋಟೊಗಳನ್ನು ಮನೆ ಗೋಡೆಗೆ ನೇತುಹಾಕಿ, ದೇವರಂತೆ ಪೂಜಿಸುತ್ತಾರೆ. ನೋವು ತುಂಬಿಕೊಂಡು ಆಸ್ಪತ್ರೆಗೆ ಬರುವವರ ಮೊಗದಲ್ಲಿ, ಹೋಗುವಾಗ ನಗು ಮೂಡಿದರೆ ವೈದ್ಯ ವೃತ್ತಿಗೆ ಅದಕ್ಕಿಂತ ದೊಡ್ಡ ಬಹುಮಾನ ಯಾವುದೂ ಇಲ್ಲ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆ

Highlights - 100 ಹಾಸಿಗೆಯ ಮಹಾನಗರ ಪಾಲಿಕೆ ಆಸ್ಪತ್ರೆ  ದಿನಕ್ಕೆ 600ಕ್ಕೂ ಹೆಚ್ಚು ಒಳರೋಗಿಗಳು ಭೇಟಿ ₹2 ಕೋಟಿಗೂ ಹೆಚ್ಚು ಮೌಲ್ಯದ ಉಪಕರಣ ದೇಣಿಗೆ

500ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ

ಆಧುನಿ ಸೌಕರ್ಯ ಹೊಂದಿರುವ ಶಸ್ತ್ರಚಿಕಿತ್ಸಾ ಕೊಠಡಿಯಿದ್ದು ಕ್ಯಾನ್ಸರ್‌ ಹೊಟ್ಟೆಯಲ್ಲಿ ಗಡ್ಡೆ ಕಿಡ್ನಿಯಲ್ಲಿ ಕಲ್ಲು ಸೇರಿದಂತೆ 500ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಕಳೆದ ಮೂರು ವರ್ಷಗಳಲ್ಲಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಮಾಡುವ ಅತ್ಯಾಧುನಿಕ ವೈದ್ಯಕೀಯ ಉಪಕರಣ ಲ್ಯಾಪ್ರಸ್ಕೋಪಿ ಶಸ್ತ್ರಚಿಕಿತ್ಸೆ ಸಹ ಇಲ್ಲಿ ಲಭ್ಯವಿದ್ದು ಈವರೆಗೆ ಅದರಲ್ಲಿ 520 ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನವಜಾತ ಶಿಶುಗಳ ತೀವ್ರ ನಿಗಾ ಘಟಕ ಫಿಸಿಯೋ‌ಥೆರಪಿ ಕೇಂದ್ರವೂ ಇಲ್ಲಿದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬದವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಇಲ್ಲಿ ಲಭ್ಯವಿದೆ. ಪ್ರತಿದಿನ 70 80ರಷ್ಟಿದ್ದ ಹೊರರೋಗಿಗಳ ಸಂಖ್ಯೆ ಈಗ 600ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.