ಕುಂದಗೋಳ: ತಾಲ್ಲೂಕಿನಲ್ಲಿ ಎಲ್ಲ ಜನಾಂಗ, ಧರ್ಮ ಮತ್ತು ಜಾತಿಗಳಲ್ಲಿ ಯಾವುದೇ ರೀತಿಯ ಊಹಾಪೋಹದಿಂದ ತೊಂದರೆ ಉಂಟಾಗದಂತೆ ಶಾಂತಿ ಕಾಪಾಡಬೇಕು ಎಂದು ತಹಶೀಲ್ದಾರ್ ರಾಜು ಮಾವರಕರ ಮನವಿ ಮಾಡಿದರು.
ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಜರುಗಿದ, ಯುದ್ಧಾನಂತರದ ಬೆಳವಣಿಗೆ ಹಾಗೂ ಪ್ರಸಕ್ತ, ಬಾಹ್ಯ– ಆಂತರಿಕ ಭದ್ರತೆ ಕುರಿತಾದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.
‘ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಕೆಲಸಕ್ಕಾಗಿ ಸಿವಿಲ್ ಡಿಫೆನ್ಸ್ ಎಂಬ ವೆಬ್‌ಸೈಟ್ ಇದೆ. ಅದರಲ್ಲೂ ‘ಆಪರೇಷನ್ ಅಭ್ಯಾಸ್’ ಎಂಬ ವೆಬ್ ಪುಟದಲ್ಲಿ ಯುವಜನರು ಸ್ವಯಂ ಪ್ರೇರಿತರಾಗಿ ಸಾಮಾಜಿಕ ಕಾರ್ಯ ನಿರ್ವಹಣೆ ಮಾಡಿಕೊಳ್ಳಲು ತಾವೇ ಸ್ವತಃ ನೋಂದಣಿ ಮಾಡಿಕೊಳ್ಳಬಹುದು’ ಎಂದರು.
‘ಅನಾಹುತ, ಸುಳ್ಳು ಸುದ್ದಿಗಳಿಗೆ ಕಿವಿಗೊಡದಿರಿ. ಸಾಮಾಜಿಕ ಜಾಲತಾಣಗಳ ಬಗ್ಗೆ ಜಿಲ್ಲಾಡಳಿತ ನಿಗಾ ವಹಿಸಿದೆ. ಸೂಕ್ಷ್ಮ ಪ್ರದೇಶಗಳ ಬಗ್ಗೆ ನಮಗೆ ಗಮನವಿದೆ’ ಎಂದರು.
ಸಿಪಿಐ ಶಿವಾನಂದ ಅಂಬಿಗೇರ, ‘ಬಾಹ್ಯ ದಾಳಿಯನ್ನು ಎದುರಿಸಲು ಸಿದ್ಧವಾಗಿದ್ದೇವೆ. ಸಾಮಾಜಿಕ ಜಾಲತಾಣ, ದೃಶ್ಯ ಮಾಧ್ಯಮ ಅಂಗೈಯಲ್ಲಿದೆ ಎಂಬ ಮಾತ್ರಕ್ಕೆ ಯಾರಿಗೂ ಧಕ್ಕೆ ತರುವಂತಹ ಚಟುವಟಿಕೆ ನಡೆಯಬಾರದು. ಜಾಲತಾಣದಲ್ಲಿ ಕೆಟ್ಟದ್ದೇ ವೇಗವಾಗಿ ಹರಡುತ್ತದೆ. ನಮ್ಮಲ್ಲಿನ ಆಂತರಿಕ ಭಿನ್ನತೆಯನ್ನು ನಿಗ್ರಹಿಸಬೇಕು’ ಎಂದರು.
‘ಶಾಂತಿಗೆ ಭಂಗ ಉಂಟಾಗುವ ಸಂದರ್ಭ ಗಮನಕ್ಕೆ ಬಂದರೆ ಸಹಾಯಕ್ಕಾಗಿ 112 ಸಂಖ್ಯೆ ಸಂಪರ್ಕಿಸಬೇಕು. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು’ ಎಂದು ವಿನಂತಿಸಿದರು.
ಕರವೇಯ ಅಧ್ಯಕ್ಷ ಕಲ್ಲಪ್ಪ ಹರಕುಣಿ, ಮುಖಂಡರಾದ ಚಿದಾನಂದ ಬೈರಪ್ಪನವರ, ಕಾಂತೇಶ ದೊಡಮನಿ, ಶೇಖಣ್ಣ ಬಾಳಿಕಾಯಿ, ಮಂಜುನಾಥ ಹಿರೇಮಠ, ಬಸವರಾಜ ದೊಡಮನಿ, ಝಾಕೀರ ಹುಸೇನ ಯರಗುಪ್ಪಿ, ಅಡಿವೆಪ್ಪ ಬಂಡಿವಾಡ, ಹನಮಂತಪ್ಪ ಮೇಲಿಮನಿ, ದಿಲೀಪ್ ಕಲಾಲ, ಮೌಲಾಸಾಬ ಹು. ಕಳ್ಳಿಮನಿ, ರವಿ ಶಿರಸಂಗಿ, ಮೋದಿನಸಾಬ ಬಂಕಾಪೂರ, ಕಾಶೀಂ ದವಡಿ, ಯಾಶೀನಸಾಬ ಕ್ಯಾಲಕೊಂಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.