ಹುಬ್ಬಳ್ಳಿ: ‘ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಸಾಹಿತ್ಯದ ಎಲ್ಲ ವಯೋಮಾನದ ಸಹೃದಯದವರೊಂದಿಗೆ ಆತ್ಮೀಯ ಸಂಬಂಧ ಇರಿಸಿಕೊಂಡಿದ್ದರು. ಅವರ ಕಾವ್ಯಪ್ರೀತಿ, ಜೀವನಪ್ರೀತಿ ಅನನ್ಯವಾದದ್ದು’ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗರಾಜ ಅಂಗಡಿ ಹೇಳಿದರು.
ಹುಬ್ಬಳ್ಳಿಯ ಅಕ್ಷರ ಸಾಹಿತ್ಯ ವೇದಿಕೆ ವತಿಯಿಂದ ಇಲ್ಲಿನ ನಾಗಸುಧೆ ಜಗಲಿಯಲ್ಲಿ ಭಾನುವಾರ ನಡೆದ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರ ಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕವಿ ಮಹಾಂತಪ್ಪ ನಂದೂರ ಅವರು, ‘ವೆಂಕಟೇಶಮೂರ್ತಿವರಿಗೆ ವಚನ ಸಾಹಿತ್ಯದ ಬಗ್ಗೆ ಇದ್ದ ಆಸಕ್ತಿಯು ನನ್ನ ಮತ್ತು ಅವರ ಸಂಬಂಧ ಬೆಸೆದಿತ್ತು. ಕಾವ್ಯದಲ್ಲಿ ಪುರಾಣ ಪಾತ್ರಗಳ ಮರುಸೃಷ್ಟಿಯಲ್ಲಿ ಅವರು ಹೆಚ್ಚಿನ ಆಸಕ್ತಿ ಹೊಂದಿದ್ದರು’ ಎಂದರು.
ಚಿಂತಕ ಪ್ರೊ.ಕೆ.ಎಸ್.ಕೌಜಲಗಿ ಮಾತನಾಡಿ, ‘ಪರಂಪರೆಯೊಂದಿಗೆ ಅನುಸಂಧಾನ ನಡೆಸುವ ರೀತಿ ಎಚ್ಚೆಸ್ವಿಯವರ ಅಧ್ಯಯನಶೀಲತೆ ಇತ್ತು. ವಿಮರ್ಶೆ ಮತ್ತು ಅನುವಾದ ಕೃತಿಗಳನ್ನು ಅವರು ನೀಡಿದ್ದಾರೆ’ ಎಂದು ಹೇಳಿದರು.
ಸುನಂದಾ ಕಡಮೆ ಅವರು ‘ಗಂಧವತಿ’ ಕವಿತೆ ವಾಚಿಸಿದರೆ, ಶಾಲಿನಿ ರುದ್ರಮುನಿ 'ಇರಬೇಕು ಇರುವಂತೆ' ಭಾವಗೀತೆ ಹಾಡಿದರು. ಪ್ರಕಾಶ ಕಡಮೆ, ಸಿ.ಎಂ.ಚೆನ್ನಬಸಪ್ಪ, ನಿರ್ಮಲಾ ಶೆಟ್ಟರ್, ಸರೋಜಾ ಮೇಟಿ, ಸುರೇಶ ಹೊರಕೇರಿ, ಸೋಮಶೇಖರ ಇಟಗಿ, ಸಂಜೀವ ದುಮಕನಾಳ, ವ್ಯಾಸ ದೇಶಪಾಂಡೆ, ಎಸ್.ಅರುಂಧತಿ ಇದ್ದರು. ಇದೇ ಸಂದರ್ಭದಲ್ಲಿ ಸಾಹಿತಿ ಜಿ.ಎಸ್. ಸಿದ್ಧಲಿಂಗಯ್ಯ ಮತ್ತು ಗ್ರಂಥಮಾಲಾ ಪ್ರಕಾಶನದ ಸಂಪಾದಕ, ಪ್ರಕಾಶಕ ಪ್ರೊ.ರಮಾಕಾಂತ ಜಿ. ಜೋಶಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.