ಹುಬ್ಬಳ್ಳಿ: ‘ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಚುರುಕು ನೀಡಬೇಕು. ಅತಿಕ್ರಮಣ ಮಾಡಿಕೊಂಡ ಭೂಮಿಯೇ ಜೀವನಕ್ಕೆ ಆಧಾರ ಎಂಬ ಪ್ರಕರಣ ಹೊರತುಪಡಿಸಿ, ಉಳಿದ ಪ್ರಕರಣಗಳಲ್ಲಿ ಕಡ್ಡಾಯವಾಗಿ ತೆರವು ಮಾಡಬೇಕು’ ಎಂದು ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
ನಗರದಲ್ಲಿ ಭಾನುವಾರ ಧಾರವಾಡ ಅರಣ್ಯ ವೃತ್ತದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಅರಣ್ಯ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ತೆರವು ಮಾಡಿದ ವರದಿಯನ್ನು ಸಲ್ಲಿಸಬೇಕು’ ಎಂದರು.
‘ನಗರದ ವಿಮಾಣ ನಿಲ್ದಾಣದ ಬಳಿಯ 26 ಎಕರೆ ಪ್ರದೇಶದಲ್ಲಿ ಸಸ್ಯ ಉದ್ಯಾನ ನಿರ್ಮಾಣ ತ್ವರಿತಗತಿಯಲ್ಲಿ ಆಗಬೇಕು. ಗಡಿಯನ್ನು ಸರಿಯಾಗಿ ಗುರುತಿಸಿ ಬೇಲಿ ನಿರ್ಮಿಸಿ, ಡಿಸೆಂಬರ್ ಒಳಗಾಗಿ ಉದ್ಘಾಟನೆ ಮಾಡಬೇಕು’ ಎಂದರು.
‘ಹಾವೇರಿ ವ್ಯಾಪ್ತಿಯ ಅರಣ್ಯ ಭಾಗದಲ್ಲಿ ಕೃಷ್ಣಮೃಗಗಳು ಬೆಳೆ ಹಾನಿ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿವೆ. ಕೃಷ್ಣ ಮೃಗಗಳ ಸಮೀಕ್ಷೆ ಮಾಡಿ, ಬೆಳೆ ಹಾನಿಗೆ ಪರಿಹಾರ ಒದಗಿಸಬೇಕು’ ಎಂದರು.
ಪ್ಲಾಸ್ಟಿಕ್ ತಡೆ– ಕಾರ್ಯಾಚರಣೆಗೆ ಅತೃಪ್ತಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವವರ ಮೇಲೆ 252 ದಾಳಿಗಳನ್ನು ನಡೆಸಿದ್ದು, ₹3.80 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ, ‘ಕನಿಷ್ಠ ಸಾವಿರ ದಾಳಿಗಳನ್ನು ನಡೆಸಬೇಕಿತ್ತು. ಕಾರ್ಯಾಚರಣೆ ತೃಪ್ತಿದಾಯಕವಾಗಿಲ್ಲ. ಮಾರುಕಟ್ಟೆಗೆ ಬರುವ ಪ್ಲಾಸ್ಟಿಕ್ ಮೂಲವನ್ನು ಪತ್ತೆಹಚ್ಚಿ, ನಿಯಂತ್ರಿಸಬೇಕು’ ಎಂದು ಎಚ್ಚರಿಸಿದರು.
‘ಪ್ಲಾಸ್ಟಿಕ್ ಕುರಿತು ಶಾಲೆಗಳು, ಬಡಾವಣೆಗಳಲ್ಲಿ ಜಾಗೃತಿ ಮೂಡಿಸಬೇಕು. ಪಾಲಿಕೆ ಸದಸ್ಯರೊಂದಿಗೆ ಸಂವಹನ ನಡೆಸಬೇಕು. ಮಹಿಳಾ ಸಂಘಗಳ ನೆರವು ಪಡೆಯಬಹುದು’ ಎಂದರು.
‘ಕಲಘಟಗಿ ತಾಲ್ಲೂಕಿನಲ್ಲಿ 19 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಈ ಭಾಗದಲ್ಲಿ ಆನೆಗಳ ಓಡಾಟವಿರುವ ಕಾರಣ ಈಗಾಗಲೇ 47 ಕಿ.ಮೀ. ಆನೆ ತಡೆ ಕಂದಕ ನಿರ್ಮಿಸಲಾಗಿದೆ. ಇನ್ನೂ 44 ಕಿ.ಮೀ. ಕಂದಕ ನಿರ್ಮಾಣ ಅಗತ್ಯವಿದೆ. ಅಲ್ಲದೆ ಇಲಾಖೆಯ ಉಪಯೋಗಕ್ಕಾಗಿ ವಾಹನದ ಅವಶ್ಯಕತೆ ಇದೆ’ ಎಂದು ಅಧಿಕಾರಿಗಳು ಗಮನ ಸೆಳೆದರು.
ಕೆರೆಗಳ ಮಾಲಿನ್ಯ ನಿಯಂತ್ರಿಸಲು ವಿಫಲವಾದರೆ ಪಾಲಿಕೆ ಆಯುಕ್ತರ ಮೇಲೆ ಪ್ರಕರಣ ದಾಖಲಿಸಿ. ಆಗಲಾದರೂ ಅವರು ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಬಹುದುಈಶ್ವರ ಖಂಡ್ರೆ ಅರಣ್ಯ ಸಚಿವ
ಶ್ರೀಗಂಧದ ಎಣ್ಣೆ ಹರಾಜು
‘ಧಾರವಾಡ ಅರಣ್ಯ ವಿಭಾಗದ ವತಿಯಿಂದ 31 ಕ್ವಿಂಟಲ್ ಶ್ರೀಗಂಧದ ತುಂಡುಗಳನ್ನು ಹರಾಜು ಮಾಡಲಾಗಿದ್ದು ಇನ್ನೂ 66 ಕ್ವಿಂಟಲ್ ಉಳಿದಿದೆ. 91.13 ಕೆ.ಜಿ. ಶ್ರೀಗಂಧದ ಎಣ್ಣೆಯನ್ನು ಜಪ್ತಿ ಮಾಡಲಾಗಿದ್ದು ಸೆ.1ರಂದು ಅವುಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಿಂದ ಅಂದಾಜು ₹ 7 ಕೋಟಿ ಆದಾಯ ಸಿಗಲಿದೆ’ ಎಂದು ಡಿಸಿಎಫ್ ವಿವೇಕ ಕವರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.