ADVERTISEMENT

ನಕಲಿ ಡಿಎಲ್‌: ಇಬ್ಬರಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 9:40 IST
Last Updated 8 ಫೆಬ್ರುವರಿ 2020, 9:40 IST
ಹಳೇ ಹುಬ್ಬಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಬೆಳ್ಳಿ–ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ
ಹಳೇ ಹುಬ್ಬಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಬೆಳ್ಳಿ–ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ   

ಹುಬ್ಬಳ್ಳಿ: ಬೇರೊಬ್ಬರ ವಾಹನ ಚಾಲನಾ ಪರವಾನಗಿ(ಡಿಎಲ್‌) ನಕಲು ಮಾಡಿ ವಾಹನ ಓಡಿಸುವಾಗ ವ್ಯಕ್ತಿಯೊಬ್ಬರಿಗೆ ಡಿಕ್ಕಿಹೊಡೆಸಿ ಸಾವಿಗೆ ಕಾರಣನಾದ ಕುಸಗಲ್ ಗ್ರಾಮದ ರಾಜೇಸಾಬ್‌ ನಲವಡಿ ಹಾಗೂ ಅವನಿಗೆ ಜಾಮೀನು ನೀಡಿದ್ದ ಮಕ್ತುಂ ಹುಸೇನ್‌ ಮುಲ್ಲಾಗೆ ಇಲ್ಲಿನ ಒಂದನೇ ಜೆಎಂಎಫ್‌ಸಿ ಕೋರ್ಟ್‌ ಎರಡು ವರ್ಷ ಜೈಲು ಶಿಕ್ಷೆ, ₹20 ಸಾವಿರ ದಂಡ ವಿಧಿಸಿದೆ.

ಅಪರಾಧಿ ರಾಜೇಸಾಬ್‌ 2010ರ ಜ.21ರಂದು ಮಹೇಂದ್ರ ಪಿಕ್‌ಅಪ್‌ ವಾಹನ ಚಾಲನೆ ಮಾಡುವಾಗ ನವಲಗುಂದ ರಸ್ತೆಯಲ್ಲಿ ಬೈಕಿಗೆ ಡಿಕ್ಕಿ ಹೊಡೆಸಿ, ಒಬ್ಬ ಸವಾರನ ಸಾವಿಗೆ ಕಾರಣನಾಗಿದ್ದನು. ಆ ವೇಳೆ ಪೊಲೀಸರಿಗೆ ರಾಜೇಸಾಬ್‌ ನಕಲಿ ಡಿಎಲ್‌ ತೋರಿಸಿರುವುದು ತನಿಖೆ ವೇಳೆ ಬಯಲಾಗಿದೆ.

ಉಮೇಶ ಗಾಣಗೇರ ಎಂಬುವವರಿಗೆ ಸೇರಿದ ಡಿಎಲ್‌ ಅನ್ನು ರಾಜೇಸಾಬ್‌ ನಕಲು ಮಾಡಿಕೊಂಡು ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿತು. ಈ ಸಂಬಂಧ ಉಪನಗರ ಠಾಣೆಯಲ್ಲಿ ರಾಜೇಸಾಬ್‌ ವಿರುದ್ಧ ಪೊಲೀಸರು ಮತ್ತೊಂದು ದೂರು ದಾಖಲಿಸಿದ್ದರು.

ADVERTISEMENT

ವಿಚಾರಣೆ ನಡೆಸಿದ ನ್ಯಾಯಾಧೀಶ ಮಹೇಶ ಪಾಟೀಲರು ಶುಕ್ರವಾರ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕ ಶ್ರೀಕಾಂತ ದಯಣ್ಣವರ್‌ ವಾದ ಮಂಡಿಸಿದ್ದರು.

ನಾಲ್ವರ ಬಂಧನ

ನಗರದ ವಿವಿಧ ಪ್ರದೇಶಗಳಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿ, ₹13.10 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳು ಹಾಗೂ ₹1.20 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಆನಂದ ನಗರದ ಮಹ್ಮದ್‌ಅಲಿ ನಾಲಬಂದ, ಬಾಣತಿಕಟ್ಟಿಯ ಮಹ್ಮದ್‌ಗೌಸ್‌ ಬಿಜಾಪುರ, ಮೆಹಬೂಬ್‌ ನಗರದ ಖ್ವಾಜಾಸಾಬ್‌ ಶಿಗ್ಗಾಂವ ಮತ್ತು ಕಲ್ಮೇಶ್ವರ ನಗರದ ಅಬ್ದುಲ್‌ಖಾದರ್‌ ಮುಜಾವರ್‌ ಬಂಧಿತರು.

ಇನ್‌ಸ್ಪೆಕ್ಟರ್‌ ಮಾರುತಿ ಗುಳಾರಿ ನೇತೃತ್ವದ ವಿಶೇಷ ತಂಡ ಹಳೇ ಹುಬ್ಬಳ್ಳಿಯಲ್ಲಿ ಆರೋಪಿಗಳನ್ನು ಬಂಧಿಸಿದೆ.

ದಂಡ

ಇಲ್ಲಿನ ಅಂಚಟಗೇರಿ ಓಣಿಯ ವಿಶ್ವನಾಥ ಮೇತ್ರಾಣಿ ಜೂಜಾಟದಲ್ಲಿ ಪಾಲ್ಗೊಂಡಿರುವುದು ಸಾಬೀತು ಪಡಿಸಿದ ಇಲ್ಲಿನ ಒಂದನೇ ಜೆಎಂಎಫ್‌ಸಿ ಕೋರ್ಟ್‌, ಅಪರಾಧಿಗೆ ₹300 ದಂಡ ವಿಧಿಸಿದೆ.

2018ರ ಫೆ. 9ರಂದು ಅಂಚಟಗೇರಿ ಓಣಿಯಲ್ಲಿ ಜೂಜಾಡುತ್ತಿದ್ದ ವೇಳೆ ಉಪನಗರ ಠಾಣೆ ಪೊಲೀಸರು ರಮೇಶ ಮೇತ್ರಾಣಿ ಮತ್ತು ವಿಶ್ವನಾಥ ಮೇತ್ರಾಣಿ ಎಂಬುವವರನ್ನು ಬಂಧಿಸಿ,ಪ್ರಕರಣ ದಾಖಲಿಸಿಕೊಂಡಿದ್ದರು. ರಮೇಶ ಮೇತ್ರಾಣಿ ಕೆಲ ತಿಂಗಳ ಹಿಂದೆ ಮೃತರಾಗಿದ್ದು, ಇನ್ನೊಬ್ಬ ಅಪರಾಧಿಗೆ ಕೋರ್ಟ್‌ ದಂಡ ವಿಧಿಸಿದೆ.

ಜೀವ ಬೆದರಿಕೆ

ಇಲ್ಲಿನ ದೇಸಾಯಿ ವೃತ್ತದ ಮೇಲ್ಸೇತುವೆ ಕೆಳಗೆ ರೇಲ್ವೆ ಹಳಿ ಮೇಲೆ ಮೇಲೆ ಮದ್ಯ ಕುಡಿಯುತ್ತಿದ್ದ ನಾಲ್ವರು ಯುವಕರು ಖಾಸಗಿ ಭದ್ರತಾ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಲ್ಯಾಪ್‌ಟಾಪ್‌ ಕಳವು

ಹುಬ್ಬಳ್ಳಿಯಿಂದ ಅಣ್ಣಿಗೇರಿಗೆ ತೆರಳುತ್ತಿದ್ದ ಬಸವರಾಜ ಹಳ್ಳಿ ಎಂಬುವವರ ಲ್ಯಾಪ್‌ಟಾಪ್‌ ಗುರುವಾರ ಹಳೇ ಬಸ್‌ ನಿಲ್ದಾಣದಲ್ಲಿ ಕಳವು ಆಗಿದೆ.

ಬ್ಯಾಗಿನಲ್ಲಿದ್ದ ₹17 ಸಾವಿರ ಮೌಲ್ಯದ ಲ್ಯಾಪ್‌ಟಾಪ್‌ ಹಾಗೂ ಎಟಿಎಂ ಕಾರ್ಡ್‌ಗಳು ಕಳವು ಆಗಿದ್ದು, ಉಪ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರು ಕಳವು

ಹಳೇಹುಬ್ಬಳ್ಳಿ ರಾಜೇಂದ್ರ ನಗರದ ಗಿರೀಶ ಅಣ್ಣಿಗೇರಿ ಅವರ ಮನೆ ಎದುರು ನಿಲ್ಲಿಸಿದ್ದ ಕಾರನ್ನು ಕಳವು ಮಾಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಟ್ಕಾ, ಬಂಧನ

ಇಲ್ಲಿನ ಗಣೇಶಪೇಟೆಯ ಕುಂಬಾರ ಓಣಿ ಅಣ್ಣಪ್ಪನ ಗುಡಿಯ ಹತ್ತಿರ ಮಟ್ಕಾ ಆಡುತ್ತಿದ್ದ ಸ್ಥಳೀಯ ನಿವಾಸಿ ನಾಗರಾಜ ಕಲಬುರ್ಗಿ ಎಂಬುವವನನ್ನು ಶಹರ ಠಾಣೆ ಪೊಲೀಸರು ಬಂಧಿಸಿ, ₹450 ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.