ADVERTISEMENT

ಖೋಟಾ ನೋಟು ಚಲಾವಣೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 4:34 IST
Last Updated 12 ಅಕ್ಟೋಬರ್ 2022, 4:34 IST

ಹುಬ್ಬಳ್ಳಿ: ನಗರದ ಚನ್ನಮ್ಮ ಬಸ್ ನಿಲ್ದಾಣದ ಬಳಿ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮೂವರನ್ನು ಉಪನಗರ ಠಾಣೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಶಿವಾನಂದ ಕಾರಜೋಳ, ವಿಜಯಪುರದ ಅಡವಿ ಶಂಕರಲಿಂಗನ ಗುಡಿ ನಿವಾಸಿ ಕಲ್ಲಯ್ಯ ಪಟ್ಟದಮಠ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೆಗ್ಗರಣಿಯ ಗುರುರಾಜ ಜಾಧವ ಬಂಧಿತರು.

ಆರೋಪಿಗಳು ಸನ್ಮಾನ್ ಲಾಡ್ಜ್‌ನಲ್ಲಿ ₹200 ಮತ್ತು ₹100 ಮುಖಬೆಲೆಯ ಖೋಟಾ ನೋಟುಗಳನ್ನು ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಯಿತು. ಅವರಿಂದ 73 ಖೋಟಾ ನೋಟುಗಳು, ಒಂದು ವಾಹನ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ಬಂಧನ: ವಾಹನ ಮತ್ತು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಗೋಕುಲ ರಸ್ತೆ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ನಾಲ್ಕು ದ್ವಿಚಕ್ರ ವಾಹನಗಳು, ನಗದು ಹಾಗೂ ₹3 ಲಕ್ಷ ಮೌಲ್ಯ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪತ್ನಿಗೆ ಚಾಕು ಇರಿತ: ಗಣೇಶಪೇಟೆಯ ರೋಹಿತ ಕಲಾಲ ಎಂಬಾತ ತನ್ನ ಪತ್ನಿಯ ಶೀಲದ ಮೇಲೆ ಅನುಮಾನಪಟ್ಟು ಜಗಳವಾಡಿ, ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.