ADVERTISEMENT

ಗಾಯತ್ರಿ ತಪೋಭೂಮಿ: ವಾರ್ಷಿಕೋತ್ಸವ ಸಂಭ್ರಮ

ತಡಸದಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ 20 ವರ್ಷ, ಕಣ್ಮನ ಸೆಳೆಯುವ ಆಕರ್ಷಕ ಅಲಂಕಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 14:47 IST
Last Updated 6 ಫೆಬ್ರುವರಿ 2020, 14:47 IST
ತಡಸದ ಗಾಯತ್ರಿ ತಪೋಭೂಮಿಯಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪನೆಯ 20ನೇ ವಾರ್ಷಿಕೋತ್ಸವ ಅಂಗವಾಗಿ ಮಾಡಲಾಗಿದ್ದ ವಿಶೇಷ ಅಲಂಕಾರ
ತಡಸದ ಗಾಯತ್ರಿ ತಪೋಭೂಮಿಯಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪನೆಯ 20ನೇ ವಾರ್ಷಿಕೋತ್ಸವ ಅಂಗವಾಗಿ ಮಾಡಲಾಗಿದ್ದ ವಿಶೇಷ ಅಲಂಕಾರ   

ಹುಬ್ಬಳ್ಳಿ: ಶಿಗ್ಗಾವಿ ತಾಲ್ಲೂಕಿನ ತಡಸ ಕ್ರಾಸ್‌ ಬಳಿ ಇರುವ ಗಾಯತ್ರಿ ತಪೋಭೂಮಿಯಲ್ಲಿ ಗಾಯತ್ರಿ ದೇವಿ ಪ್ರತಿಷ್ಠಾಪಿಸಿ 20 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಅಲ್ಲಿ ಸಂಭ್ರಮ ಮನೆ ಮಾಡಿದೆ. ಗುರುವಾರ ಆರಂಭವಾದ ಎರಡು ದಿನಗಳ ಕಾರ್ಯಕ್ರಮದಲ್ಲಿ ಹಬ್ಬದ ವಾತಾವರಣ ಕಂಡುಬರುತ್ತಿದೆ.

ಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿ (ವಲ್ಲಭ ಚೈತನ್ಯ ಗುರೂಜಿ) ಎರಡು ದಶಕದ ಹಿಂದೆ ಗಾಯತ್ರಿದೇವಿ, ಗಣಪತಿ, ಸುಭ್ರಮಣ್ಯ ಮತ್ತು ಅನ್ನಪೂರ್ಣ ದೇವತೆಯ ಮೂರ್ತಿ ಪ್ರತಿಷ್ಠಾಪಿಸಿದರು. ಈ ಪ್ರತಿಷ್ಠಾಪನೆಯ ವಾರ್ಷಿಕೋತ್ಸವನನ್ನು ಎರಡು ದಿನ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಲೋಕ ಕಲ್ಯಾಣಕ್ಕಾಗಿ ಗುರುವಾರ ಗಾಯತ್ರಿ ಹೋಮ, ವಿಶೇಷ ಕುಂಕುಮಾರ್ಚನೆ, ವಿಷ್ಣು ಸಮಸ್ರನಾಮ, ಗಣ ಹೋಮ, ಷಣ್ಮುಖ ಹೋಮ, ಕಾಕಡಾರತಿ, ಸಾಮೂಹಿಕ ಗಾಯತ್ರಿ ಜಪ ಪಠಣ ನಡೆದವು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ADVERTISEMENT

ಎರಡು ದಶಕದ ಸಂಭ್ರಮ ಸ್ಮರಣೀಯವಾಗಿಸಲು ಹಿಮಾಲಯದಿಂದ ಧರಣಿ ದಾಸ್, ಉತ್ತರ ಕಾಶಿಯ ರಾಮ ಸ್ವರೂಪಾನಂದ ಸ್ವಾಮೀಜಿ, ಗಾಯತ್ರಿ ಉಪಾಸಕರಾದ ಕೇರಳದ ಯೋಗಾನಂದ ಸರಸ್ವತಿ ಬಂದಿದ್ದಾರೆ. ಹುಬ್ಬಳ್ಳಿಯ ಪ್ರಣಾವನಂದ ಸ್ವಾಮೀಜಿ ಕೂಡ ಭಾಗವಹಿಸಿದ್ದರು. ಶಿರಹಟ್ಟಿಯ ಫಕ್ಕೀರ ಸ್ವಾಮೀಜಿ ಪ್ರವಚನ ನಡೆಸಿಕೊಟ್ಟರು.

ಗಾಯತ್ರಿ ಮೂರ್ತಿಗೆ ಹೂವಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿದ್ದು ಭಕ್ತಾದಿಗಳನ್ನು ಆಕರ್ಷಿಸುತ್ತಿದೆ. ನೂರಾರು ಭಕ್ತರು ದೇವಿಯ ದರ್ಶನ ಪಡೆದು ಪ್ರಸಾದ ಸವಿದರು.

ಗಾಯತ್ರಿ ತಪೋಭೂಮಿ ಚಾರಿಟಬಲ್‌ ಟ್ರಸ್ಟ್‌ ಉಪಾಧ್ಯಕ್ಷ ಅಶೋಕ ಹರಪನಹಳ್ಳಿ ಮಾತನಾಡಿ ‘ಗಾಯತ್ರಿ ದೇವಿಗೆ ಹೋಮ ಮಾಡುವುದರಿಂದ ಜನರಿಗೆ ಒಳ್ಳೆಯದಾಗುತ್ತದೆ. ಎಲ್ಲರಿಗೂ ಒಳ್ಳೆಯದಾಗಬೇಕು ಎನ್ನುವುದು ವಲ್ಲಭ ಚೈತನ್ಯ ಗುರೂಜಿ ಅವರ ಆಶಯವಾಗಿತ್ತು. ಅದು ಈಗ ಈಡೇರುತ್ತಿದೆ. 20 ವರ್ಷಗಳಲ್ಲಿ ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಮುಂದೆಯೂ ಹತ್ತಾರು ಯೋಜನೆಗಳಿವೆ’ ಎಂದರು.

ಟ್ರಸ್ಟ್‌ನ ಪ್ರಮುಖರಾದ ನೀಲಕಂಠ ಆಕಳವಾಡಿ ‘ಭಕ್ತರ ಅನುಕೂಲಕ್ಕಾಗಿ 80 ಕೊಠಡಿಗಳ ಯಾತ್ರಾ ನಿವಾಸ, ಅಂದಾಜು ₹30 ಲಕ್ಷ ವೆಚ್ಚದ ಆಧುನೀಕರಣ ಮಾದರಿಯಲ್ಲಿ ಗೋ ಶಾಲೆ ಮತ್ತು ₹25 ಲಕ್ಷ ಅಂದಾಜು ವೆಚ್ಚದಲ್ಲಿ ವಲ್ಲಭ ಚೈತನ್ಯರ ಸ್ಮಾರಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ’ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಕೆ.ಎಲ್‌. ಕುಲಕರ್ಣಿ ಪ್ರಮುಖರಾದ ವಿನಾಯಕ ಆಕಳವಾಡಿ, ಗೋವಿಂದ ಜೋಶಿ, ಅಶೋಕ, ನಾರಾಯಣ ದಿಕ್ಷೀತ್‌, ಡಾ. ಎಸ್‌.ವಿ. ಕೊಣ್ಣೂರು, ಬಲರಾಮ ನಾಯಕ, ಆರ್‌.ಡಿ. ರಿತ್ತು, ಜಿ.ಎಸ್‌. ಕುಲಕರ್ಣಿ, ರಾಜು ಕುಲಕರ್ಣಿ, ಶ್ರೀಪಾದ ದೇಸಾಯಿ, ಎಚ್‌.ವಿ. ಕಡೇಗಾರ, ಆನಂದ ಕುಲಕರ್ಣಿ, ರಾಜು ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.