ADVERTISEMENT

ಜಿಮ್ಖಾನಾ ಮೈದಾನ ಪ್ರಕರಣ: ಆಕ್ಷೇಪಣಾ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 14:03 IST
Last Updated 11 ಮಾರ್ಚ್ 2020, 14:03 IST
   

ಹುಬ್ಬಳ್ಳಿ: ದೇಶಪಾಂಡೆ ನಗರದ ಜಿಮ್ಖಾನಾ ಮೈದಾನ ಸಾರ್ವಜನಿಕ ಸ್ಥಳವಾಗಿದ್ದು, ಅಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂದು ಹುಬ್ಬಳ್ಳಿ ಸ್ಪೋರ್ಟ್ಸ್‌ ಗ್ರೌಂಡ್‌ ಬಚಾವೋ ಸಮಿತಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಇಲ್ಲಿನ ಮೂರನೇ ಜೆಎಂಎಫ್‌ಸಿ ಕೋರ್ಟ್‌ ಎತ್ತಿ ಹಿಡಿದಿದೆ.

ಈ ಅರ್ಜಿಯನ್ನು ಪರಿಗಣಿಸಬಾರದು ಎಂದು ಕರ್ನಾಟಕ ಜಿಮ್ಖಾನಾ ಸಂಸ್ಥೆ ಸಲ್ಲಿಸಿದ್ದ ಆಕ್ಷೇಪಣೆ ಅರ್ಜಿ ಸೋಮವಾರ ತಿರಸ್ಕತಗೊಂಡಿದ್ದು, ಮಾ. 18ರಿಂದ ವಿಚಾರಣೆ ನಡೆಸಲು ಕೋರ್ಟ್‌ ನಿರ್ಧರಿಸಿದೆ.

ಜಿಮ್ಖಾನಾ ಮೈದಾನವನ್ನು ಜಿಮ್ಖಾನಾ ಸಂಸ್ಥೆ ಸ್ವಂತ ಆಸ್ತಿಯಂತೆ ಬಳಸಿಕೊಳ್ಳುತ್ತಿದೆ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಸೇರಿ 13 ಮಂದಿ ಹೋರಾಟ ನಡೆಸಿದ್ದರು. ಸಂಸ್ಥೆಯವರು ಅಕ್ರಮವಾಗಿ ಮೈದಾನ ಪ್ರವೇಶ ಮಾಡಿದ್ದಾರೆ. ಇದಕ್ಕೆ ನಿರ್ಬಂಧ ಹೇರಬೇಕು ಎಂದು ಹೇಳಿದ್ದರು.

ADVERTISEMENT

ಮಹಾನಗರ ಪಾಲಿಕೆಯಿಂದ ಪರವಾನಗಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ. ಸರ್ಕಾರ ಇದನ್ನು ತನ್ನ ವಶಕ್ಕೆ ಪಡೆಯಬೇಕು ಎಂದು ಪುಟ್ಟಪ್ಪ ಹಾಗೂ ಅವರ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಆರೋಪ ನಿರಾಧಾರವಾಗಿದ್ದು, ಅರ್ಜಿ ತಿರಸ್ಕರಿಸಬೇಕು ಎಂದು ಜಿಮ್ಖಾನಾ ಸಂಸ್ಥೆಯ ಪರ ಇರುವವರು ಆಕ್ಷೇಪಣೆ ಸಲ್ಲಿಸಿದ್ದರು.

‘ಗ್ರೌಂಡ್‌ ಬಚಾವೋ ಸಮಿತಿ ಸಲ್ಲಿಸಿದ ಮಧ್ಯಂತರ ಅರ್ಜಿಗೆ ನಾವು ಆಕ್ಷೇಪಣೆ ಸಲ್ಲಿಸಿದ್ದೇವು. ಕೋರ್ಟ್‌ ಅದನ್ನು ವಜಾಗೊಳಿಸಿದೆಯಷ್ಟೇ. ಮೂಲ ಪ್ರಕರಣ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿಯಿದೆ’ ಎಂದು ಜಿಮ್ಖಾನಾ ಸಂಸ್ಥೆ ಅಧ್ಯಕ್ಷ ವೀರಣ್ಣ ಸವಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.