ADVERTISEMENT

ಅಧ್ಯಾತ್ಮದ ಸೆಳೆತವಿರುವ ಗಿರೀಶ ಆಶ್ರಮ: ರೇವಣಸಿದ್ಧೇಶ್ವರ ಮಹಾರಾಜ

ಕರ್ನಾಟಕ ಏಕೀಕರಣದ ರೂವಾರಿ ಮಾಧವಾನಂದ ಪ್ರಭು ಅವರ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 11:06 IST
Last Updated 2 ನವೆಂಬರ್ 2022, 11:06 IST
ಹುಬ್ಬಳ್ಳಿ ವಿದ್ಯಾನಗರದ ಗಿರೀಶ ಆಶ್ರಮದಲ್ಲಿ ಬುಧವಾರ ನಡೆದ ಕರ್ನಾಟಕ ಏಕೀಕರಣದ ರೂವಾರಿ ಮಾಧವಾನಂದ ಪ್ರಭು ಅವರ ಜಯಂತ್ಯುತ್ಸವದಲ್ಲಿ ವಿಜಯಪುರದ ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜರು ಮಾತನಾಡಿದರು /ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ವಿದ್ಯಾನಗರದ ಗಿರೀಶ ಆಶ್ರಮದಲ್ಲಿ ಬುಧವಾರ ನಡೆದ ಕರ್ನಾಟಕ ಏಕೀಕರಣದ ರೂವಾರಿ ಮಾಧವಾನಂದ ಪ್ರಭು ಅವರ ಜಯಂತ್ಯುತ್ಸವದಲ್ಲಿ ವಿಜಯಪುರದ ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜರು ಮಾತನಾಡಿದರು /ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಈ ಗಿರೀಶ ಆಶ್ರಮಕ್ಕೆ, ಇಲ್ಲಿಯ ಭೂಮಿಗೆ ಅಧ್ಯಾತ್ಮದ ಸೆಳೆತವಿದೆ. ಹತ್ತಾರು ಕಿ.ಮೀ. ದೂರದಿಂದ ಗುಡ್ಡದ ಕಲ್ಲನ್ನು ಹೊತ್ತು ತಂದು ಆಶ್ರಮ ನಿರ್ಮಿಸಲಾಗಿದೆ. ಹಿರಿಯರ ನಂಬಿಕೆ ಹಾಗೂ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಕಾರ್ಯ ನಡೆಯಬೇಕಿದೆ’ ಎಂದು ವಿಜಯಪುರದ ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜ ಹೇಳಿದರು.

ಇಲ್ಲಿನ ವಿದ್ಯಾನಗರದ ಗಿರೀಶ ಆಶ್ರಮದಲ್ಲಿ ಬುಧವಾರ ನಡೆದ ಕರ್ನಾಟಕ ಏಕೀಕರಣದ ರೂವಾರಿ ಮಾಧವಾನಂದ ಪ್ರಭು ಅವರ 107ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘1980ರಿಂದ ಮಾಧವಾನಂದ ಪ್ರಭು ಅವರ ಜಯಂತ್ಯುತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅವರ ಬದುಕು, ನಡೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳುವುದು ಅತ್ಯಗತ್ಯ. ಜಗತ್ತಿಗೆ ಸಾಮರಸ್ಯದ ಪಾಠ ಮಾಡಿ, ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ರೂವಾರಿ ಅವರು. ಅಧ್ಯಾತ್ಮದ ಸತ್ ಪುರುಷರಾಗಿ, ದೇವ ಮಾನವರಾಗಿ ಸಮಾಜದ ಏಳ್ಗೆಗೆ ದುಡಿದಿದ್ದರು’ ಎಂದರು.

ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಮಾತನಾಡಿ, ವಿದ್ಯಾನಗರದಲ್ಲಿ ಅಧ್ಯಾತ್ಮದ ಸೆಳೆತವಿರುವ ಆಶ್ರಮವಿದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಈ ಆಶ್ರಮ ದೊಡ್ಡ ಧಾರ್ಮಿಕ ಕೇಂದ್ರವಾಗಿ ಬೆಳೆಯಬೇಕು. ಇಲ್ಲೊಂದು ಧ್ಯಾನಕೇಂದ್ರ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಾಧವಾನಂದ ಪ್ರಭು ಅವರ ಜೀವನಗಾಥೆ ನಮ್ಮ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೂ ಪಸರಿಸುವಂತಾಗಬೇಕು’ ಎಂದು ಹೇಳಿದರು.

ADVERTISEMENT

‘₹2 ಕೋಟಿ ವೆಚ್ಚದಲ್ಲಿ ಆಶ್ರಮದಲ್ಲಿ ಜ್ಞಾನ ಮಂದಿರ ಅಥವಾ ಯೋಗ ಮಂದಿರ ನಿರ್ಮಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ನನ್ನ ಕೈಲಾದ ಕೆಲಸ ಮಾಡಲು ಸಿದ್ಧನಿದ್ದೇನೆ’ ಎಂದು ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ ಹೇಳಿದರು.

ತಮಣ್ಣಪ್ಪ ವೆಂಕಟಾಪುರ, ಶ್ರೀಧರ ರಡ್ಡೇರ, ಸಂಗಪ್ಪಣ್ಣ ಸಾಲಿ, ವಸಂತ ನಾಗನೂರು, ರಾಮನೂರು, ಡಾ. ಚಂದ್ರಪ್ರಭಾ, ನಾಗಪ್ಪ ಚಿನಗೇರಿ, ರಾಮಣ್ಣ ನಾಗನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.