ಧಾರವಾಡ: ಹಲವು ದಿನಗಳಿಂದ ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಜಿಲ್ಲೆಯ ಹಲವೆಡೆ ಹೆಸರು, ಸೋಯಾಬೀನ್ ಬೆಳೆಗಳಿಗೆ ಎಲೆ ತಿನ್ನುವ ಹಾಗೂ ಕಾಯಿ ಕೊರೆಯುವ ಕೀಟಭಾದೆ ಹೆಚ್ಚಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಉತ್ತಮ ಮುಂಗಾರು ಮಳೆ ಮತ್ತು ಪೂರಕ ವಾತಾವರಣದಿಂದ ಜಿಲ್ಲೆಯಲ್ಲಿ ಹೆಸರು 97,406 ಹೆಕ್ಟೇರ್ ಹಾಗೂ 41,882 ಹೆಕ್ಟೇರ್ ಪ್ರದೇಶದಲ್ಲಿ ರೈತರು ಸೋಯಾ ಅವರೆ ಬಿತ್ತನೆ ಮಾಡಿದ್ದಾರೆ. ಹುಲುಸಾಗಿ ಬೆಳೆದಿದ್ದ ಬೆಳೆಗಳಿಗೆ ಕಾಳು ಕಟ್ಟುವ ಹಂತದಲ್ಲಿ ಕೀಟ ಬಾಧೆ ಶುರುವಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಇಳುವರಿ ಕುಂಠಿತದ ಆತಂಕ ಶುರುವಾಗಿದೆ.
ತಡಕೋಡ, ಕುರಬಗಟ್ಟಿ, ಮಂಗಳಗಟ್ಟಿ, ಕಲ್ಲೂರ, ಕೊಟಬಾಗಿ, ಅಮ್ಮಿನಬಾವಿ, ಶಿಂಗನಹಳ್ಳಿ, ಶಿವಳ್ಳಿ, ಕೋಟೂರ, ಮಾದನಬಾವಿ, ಗರಗ, ಜಿರಿಗವಾಡ, ದುಬ್ಬಣಮರಡಿ, ಅಗಸನಹಳ್ಳಿ, ಅಮ್ಮಿನಬಾವಿ, ಹೆಬ್ಬಳ್ಳಿ, ಶಿವಳ್ಳಿ ಸೇರಿದಂತೆ ಜಿಲ್ಲೆಯ ವಿವಿಧಡೆ ಹೆಸರು ಮತ್ತು ಸೋಯಾಬೀನ್ ಬೆಳೆಗೆ ಕೀಟಬಾಧೆ ಆವರಿಸಿದೆ.
ರೈತರು ನಿರಂತರವಾಗಿ ಕೀಟನಾಶಕ ಸಿಂಪಡಣೆ ಮಾಡುವುದರಲ್ಲಿ ಕಾಲ ಕಳೆಯುವಂತಾಗಿದೆ. ವಾರದಲ್ಲಿ ಒಮ್ಮೆ ಕೀಟನಾಶಕ ಸಿಂಪಡಣೆ ಮಾಡುವುದು ಅನಿವಾರ್ಯವಾಗಿದೆ.
ಹೆಸರು ಮತ್ತು ಸೋಯಾಬೀನ್ ಎಲೆ ಮೇಲೆ ಮೊಟ್ಟೆಗಳು ಹೇರಳವಾಗಿ ಕಾಣಿಸುತ್ತವೆ. ಕೀಟಗಳು ಚಿಗುರು ಎಲೆಗಳನ್ನು ತಿಂದು ಕಾಯಿ ಕೊರೆದು ರಂಧ್ರ ಮಾಡುತ್ತಿವೆ. ಇದರಿಂದ ಕಾಯಿ ಹಾಳಾಗುತ್ತಿವೆ. ಬೆಳೆಗಳು ಹೆಚ್ಚು ಬೆಳೆದು, ಕಾಂಡ ದೊಡ್ಡದಾಗಿದ್ದು, ಕೀಟ ನಾಶಕ ಸಿಂಪಡಣೆ ಪರಿಣಾಮಕಾರಿಯಾಗುತ್ತಿಲ್ಲ ಎನ್ನುತ್ತಾರೆ ರೈತರು.
’ಕೀಟ ಬಾಧೆಯಿಂದ ಬೆಳೆಗೆ ತಕ್ಕಂತೆ ಕಾಯಿ ಕಟ್ಟಿಲ್ಲ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದ ಸ್ಥಿತಿ ಇದೆ. ಬಿತ್ತನೆ ಬೀಜ, ವ್ಯವಸಾಯ, ಕೂಲಿ ಸಹಿತ ಎಕರೆಗೆ ₹12 ರಿಂದ ₹18 ಸಾವಿರ ಖರ್ಚಾಗಿದೆ. ಬೆಳೆ ಎತ್ತರವಾಗಿ ಬೆಳೆದಿರುವುದರಿಂದ ರೈತರು ವಿಷ ಜಂತುಗಳಿಗೆ ಹೆದರಿ ಔಷಧ ಸಿಂಪಡಣೆಗೆ ಬರುತ್ತಿಲ್ಲ. ಎಕರೆಗೆ ₹400 ಕೊಟ್ಟು ವಾರಕ್ಕೆ ಒಮ್ಮೆ ಟ್ಯಾಕ್ಟರ್ ಮೂಲಕ ಮೂರು ಬಾರಿ ಔಷಧ ಸಿಂಪಡಿಸಿದರೂ ಕೀಟಗಳ ಪ್ರಮಾಣ ಕಡಿಮೆಯಾಗುತ್ತಿಲ್ಲ’ ಎಂದು ಅಮ್ಮಿನಬಾವಿ ರೈತ ಈಶ್ವರ ಸೂರ್ಯವಂಶಿ ‘ಪ್ರಜಾವಾಣಿ’ ಗೆ ತಿಳಿಸಿದರು.
’ಸೋಯಾಬೀನ್ ಹಾಗೂ ಹೆಸರು ಬೆಳೆಗಳಲ್ಲಿ ಸ್ಪೋಡೋಪ್ಟೇರಾ ಹಾಗೂ ಹೆಲಿಕೋವರ್ಪಾ ಕೀಟ ಭಾದೆ ಕಂಡುಬಂದಿದ್ದು, ಸ್ಪೋಡೋಪ್ಟೇರಾ ಬಹುಭಕ್ಷಕ ಕೀಟವಾಗಿದೆ. ಇವು ಎಲೆಯ ಮೇಲೆ ಭಾರಿ ಮೋಟ್ಟೆಗಳನ್ನು ಇಡುತ್ತವೆ. ಮೊದಲು ಎಲೆಯನ್ನು ತಿನ್ನುತ್ತವೆ. ನಂತರ ಕಾಂಡ ಮತ್ತು ಕಾಯಿಗಳನ್ನು ರಂಧ್ರ ಮಾಡುತ್ತವೆ. ರಾತ್ರಿ ಹೊತ್ತು ಈ ಕೀಟೆಗಳ ಹಾವಳಿ ತೀವ್ರವಾಗಿರುತ್ತದೆ. ರೈತರು ಬೆಳಿಗ್ಗೆ 10 ರೊಳಗೆ ಹಾಗೂ ಸಂಜೆ 4 ಗಂಟೆ ನಂತರ ಔಷಧಿ ಸಿಂಪಡಣೆ ಮಾಡಿದರೆ ಕೀಟಗಳನ್ನು ನಿಯಂತ್ರಿಸಬಹುದು’ ಎಂದು ಕೃಷಿ ವಿಶ್ವವಿದ್ಯಾಲಯದ ಬೇಸಾಯಶಾಸ್ತ್ರ ವಿಭಾಗದ ವಿಜ್ಞಾನಿ ಬಸವರಾಜ ಏಣಗಿ ತಿಳಿಸಿದರು.
ಸೋಯಾಬೀನ್ ಹಾಗೂ ಹೆಸರು ಬೆಳೆಗೆ ಕೀಟ ಬಾಧೆಯಿಂದ ಹೆಚ್ಚಾಗಿದೆ. ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಕೃಷಿ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಒದಗಿಸಬೇಕುಮೌನೇಶ ದರಗಾದ ಕೋಟೂರ ರೈತ
‘ಕೀಟಗಳ ಹತೋಟಿಗೆ ಕ್ರಮವಹಿಸಿ’
ಕೀಟಗಳ ಹತೋಟಿಗೆ ಒಂದು ಲೀಟರ್ ನೀರಿಗೆ ಕ್ಲೋರ್ಯಾಂಥ್ರೋನೀಲಿಪ್ರೋಲ್ ಶೇ 18.5 ಎಸ್‍ಸಿ 0.4 ಎಂಎಲ್ ಲೀಟರ್ ನೀರಿಗೆ ಅಥವಾ ಕ್ಲೋರ್ಯಾಂಥ್ರೋನೀಲಿಪ್ರೋಲ್ ಮತ್ತು ಲ್ಯಾಂಬ್ಡಾಸೈಲೊಥ್ರಿನ್ 0.4 ಎಂಎಲ್ ಲೀಟರ್ ಅಥವಾ ಸ್ಪೈನೋಸೈಡ್ 45 ಎಸ್‍ಸಿ 0.2 ಎಂಎಲ್ ಲೀಟರ್ ನೀರಿಗೆ ಅಥವಾ ಪ್ಲ್ಯೂಬೆಂಡಿಮೈಡ ಶೇ 20 ಡಜಿ 0.2 ಗ್ರಾಂ ಲೀಟರ್ ಅಥವಾ ಸ್ಪೈನೆಟೋರಾಮ್ 11.7 ಎಸ್‍ಸಿ 0.4 ಎಂಎಲ್ ಲೀಟರ್ ನೀರಿಗೆ ಸಿಂಪಡಣೆ ಮಾಡಬೇಕು. ಕೀಟದ ಬಾಧೆ ಕುರಿತು ರೈತರಿಗೆ ರೈತ ಸಂಜೀವಿನಿ ವಾಹನ ಜಾಗೃತಿ ಮೂಡಿಸಲಾಗುತ್ತಿದೆ. ಹೊಲಗಳಿಗೆ ತೆರಳಿ ಅಗತ್ಯ ಸಲಹೆ-ಸೂಚನೆ ನೀಡಲಾಗುತ್ತಿದೆ’ ಎಂದು ಧಾರವಾಡದ ಸಹಾಯ ಕೃಷಿ ನಿರ್ದೇಶಕ ರಾಜಶೇಖರ ಅನಗೌಡರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.