ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಬದಾಗುಂದಿ ಹಳ್ಳಿ ಸಮೀಪ ರೆಸಾರ್ಟ್ ಪ್ರದೇಶ ಸುತ್ತ ಗಡಿ ಗುರುತಿಸಿರುವ ಭಾಗದಲ್ಲಿ ಒಂದು ತಿಂಗಳೊಳಗೆ ಬೇಲಿ ನಿರ್ಮಿಸಲು ಅರಣ್ಯ ಇಲಾಖೆಗೆ ಹೈಕೋರ್ಟ್ ಧಾರವಾಡ ಪೀಠ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಬಿ.ಎಂ.ಶ್ಯಾಮಪ್ರಸಾದ ಮತ್ತು ರಾಮಚಂದ್ರ ಹುದ್ದಾರ ಅವರಿದ್ದ ವಿಭಾಗೀಯ ಪೀಠ ಆದೇಶ ನೀಡಿ, ಪ್ರಕರಣವನ್ನು ವಿಲೇವಾರಿಗೊಳಿಸಿದೆ. ಬೇಲಿ ನಿರ್ಮಾಣಕ್ಕೆ ಅರಣ್ಯ ಇಲಾಖೆಗೆ ಸಹಕಾರ ನೀಡುವಂತೆ ಮೇಲ್ಮನವಿದಾರರಿಗೆ (ರೆಸಾರ್ಟ್ ಒಡತಿ ಸ್ಮಿತಾ) ಅವರಿಗೆ ನಿರ್ದೇಶನ ನೀಡಿದೆ.
ಬೇಲಿ ಭಾಗದಲ್ಲಿನ ತಾತ್ಕಾಲಿಕ ನಿರ್ಮಾಣಗಳನ್ನು ರೆಸಾರ್ಟ್‌ನವರು ತೆರವುಗೊಳಿಸಬೇಕು. ಒಂದು ವೇಳೆ ಅವರು ಮಾಡದಿದ್ದರೆ ಅರಣ್ಯ ಇಲಾಖೆಯವರು ತೆರವುಗೊಳಿಸಬೇಕು. ರೆಸಾರ್ಟ್ ಪ್ರವೇಶಕ್ಕೆ ಜಾಗ ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
‘ವಿಸ್ಲಿಂಗ್ ವುಡ್ಸ್ ರೆಸಾರ್ಟನವರು ಅರಣ್ಯ ಜಾಗ ಅತಿಕ್ರಮಣ ಮಾಡಿರುವುದಾಗಿ ಅರಣ್ಯ ಇಲಾಖೆ ಗುರುತಿಸಿತ್ತು. ರೆಸಾರ್ಟ್ ಮಾಲೀಕರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಏಕಸದಸ್ಯ ಪೀಠದ ಆದೇಶಕ್ಕೆ ಸಂಬಂಧಿಸಿದಂತೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಭಾಗೀಯ ಪೀಠವು ಬೇಲಿ ನಿರ್ಮಾಣಕ್ಕೆ ಸೂಚನೆ ನೀಡಿದೆ. ಬೇಲಿ ನಿರ್ಮಾಣ ಕಾರ್ಯವನ್ನು ಇಲಾಖೆಯಿಂದ ಈಗಾಗಲೇ ಆರಂಭಿಸಲಾಗಿದೆ’ ಎಂದು ಉತ್ತರಕನ್ನಡ ಜಿಲ್ಲೆ ಅರಣ್ಯಸಂರಕ್ಷಣಾಧಿಕಾರಿ ವಸಂತ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.