ADVERTISEMENT

ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಿ, ಮಹಾಸಭಾ ಯಾರ ಸ್ವತ್ತಲ್ಲ: ಅರವಿಂದ ಬೆಲ್ಲದ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 9:15 IST
Last Updated 21 ಸೆಪ್ಟೆಂಬರ್ 2025, 9:15 IST
<div class="paragraphs"><p>ಅರವಿಂದ ಬೆಲ್ಲದ</p></div>

ಅರವಿಂದ ಬೆಲ್ಲದ

   

– ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ‘ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಬೇಕು. ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಅವರವರ ವಿವೇಚನೆಗೆ ಬಿಟ್ಟಿದ್ದು ಎನ್ನುವ ಸಚಿವ ಈಶ್ವರ ಖಂಡ್ರೆ ಹೇಳಿಕೆ ವೈಯಕ್ತಿವಾದದ್ದೇ ಹೊರತು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿರ್ಧಾರವಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ಹೇಳಿದರು.

ADVERTISEMENT

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾವೇಶದಲ್ಲಿ ಕೆಲವು ಸ್ವಾಮೀಜಿಗಳು ಧರ್ಮದ ಕುರಿತು ವಿತಂಡವಾದ ಮಂಡಿಸಿದ್ದಾರೆ. ಸಚಿವರು ಹಾಗೂ ಕೆಲವು ನಾಯಕರು ವಿವೇಚನೆ ಅನುಸಾರ ಹಾಗೂ ವೀರಶೈವ ಲಿಂಗಾಯತ ಧರ್ಮ ಎಂದೇ ಬರೆಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಇವೆಲ್ಲ ರಾಜಕೀಯ ಪ್ರೇರಿತ ಹೇಳಿಕೆಗಳು. ಮಹಾಸಭಾ ಯಾರ ವೈಯಕ್ತಿಕ ಆಸ್ತಿಯಲ್ಲ’ ಎಂದು ಕಿಡಿಕಾರಿದರು.

‘ಬಸವಣ್ಣ ಮೌಢ್ಯದ ಬಗ್ಗೆ ಹೇಳಿದ್ದಾರೆಯೇ ಹೊರತು, ಹಿಂದೂ ಧರ್ಮ ಬೇಡ ಎಂದು ಎಲ್ಲಿಯೂ ಹೇಳಿಲ್ಲ. ಎಡಪಂಥೀಯರ ಟೂಲ್‌ಕಿಟ್‌ನಿಂದ ಸಮಾಜವನ್ನು ದಾರಿ ತಪ್ಪಿಸಲಾಗುತ್ತಿದೆ. ಮುಖ್ಯಮಂತ್ರಿ ಖುರ್ಚಿ ಭದ್ರಪಡಿಸಿಕೊಳ್ಳಲು ಸಿದ್ದರಾಮಯ್ಯ ಅವರು ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಆ ಮೂಲಕ ಹಿಂದೂ ಸಮಾಜವನ್ನು ಒಡೆದು, ಹೈಕಮಾಂಡ್‌ ಮನವೊಲಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸಮೀಕ್ಷೆಯ ಜಾತಿ ಕಾಲಂನಲ್ಲಿ ಹೆಸರೇ ಕೇಳದ ನೂರಾರು ಜಾತಿಗಳನ್ನು ಸೇರಿಸಲಾಗಿದೆ. ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಮೆಚ್ಚಿಸಲು, ಕ್ರಿಶ್ಚಿಯನ್‌ಗೆ ಸಂಬಂಧಿಸಿ ನಲವತ್ತಾರು ಜಾತಿಗಳನ್ನು ಸಿದ್ದರಾಮಯ್ಯ ಹೆಸರಿಸಿದ್ದಾರೆ. ಮತಾಂತರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಾತಿ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು.

‘ಸಮಾಜದ ಜನಪ್ರತಿನಿಧಿಗಳಾಗಲಿ, ಮಠಾಧೀಶರಾಗಲಿ ಗೊಂದಲ ಸೃಷ್ಟಿಸುವ ಬದಲು, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಠಾಧೀಶರನ್ನು ಮುಂದೆ ಬಿಟ್ಟು, ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಸಾಂವಿಧಾನಿಕವಾಗಿ ಮಾನ್ಯತೆ ಇರುವುದು ಆರು ಧರ್ಮಗಳಿಗೆ ಮಾತ್ರ’ ಎಂದರು.

ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಕ್ಕೆ ಧಕ್ಕೆ ಆದಾಗಲೆಲ್ಲ ಜಾತಿ, ಧರ್ಮವನ್ನು ಮುಂಚೂಣಿಗೆ ತರುತ್ತಾರೆ. ಹೈಕಮಾಂಡ್‌ಗೆ ಹತ್ತಿರವಾಗಬೇಕೆನ್ನುವುದು ಅವರ ಉದ್ದೇಶ.
–ಎಂ.ಆರ್‌. ಪಾಟೀಲ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.