ADVERTISEMENT

ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ಚಾಂಪಿಯನ್‌

ಮೊಹಮ್ಮದ್‌ ಅತ್ತಾರ್‌ ಸ್ಮರಣಾರ್ಥ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 26 ಮೇ 2022, 3:43 IST
Last Updated 26 ಮೇ 2022, 3:43 IST
ಮೊಹಮ್ಮದ್‌ ಅತ್ತಾರ್‌ ಸ್ಮರಣಾರ್ಥ ನಡೆದ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್ ಆದ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ತಂಡ
ಮೊಹಮ್ಮದ್‌ ಅತ್ತಾರ್‌ ಸ್ಮರಣಾರ್ಥ ನಡೆದ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್ ಆದ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ತಂಡ   

ಹುಬ್ಬಳ್ಳಿ: ಸವಾಲಿನ ಮೊತ್ತ ಕಲೆಹಾಕಿದ್ದ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ (ಎಚ್‌ಎಸ್‌ಸಿ) ತಂಡ, ಮೊಹಮ್ಮದ್‌ ಅತ್ತಾರ್‌ ಸ್ಮರಣಾರ್ಥ ನಡೆದ 14 ವರ್ಷದ ಒಳಗಿನವರ ಅಂತರ ಕ್ಯಾಂಪ್‌ ಆಹ್ವಾನಿತ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಯಿತು.

ಧಾರವಾಡದ ಎಸ್‌ಡಿಎಂ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಫೈನಲ್‌ನಲ್ಲಿ ಈ ತಂಡ 67 ರನ್‌ಗಳ ಗೆಲುವು ದಾಖಲಿಸಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಎಚ್‌ಎಸ್‌ಸಿ 40 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 246 ರನ್‌ ಗಳಿಸಿತು. ಆಯುಷ್ ಪಾಟೀಲ (128, 100ಎಸೆತ) ಭರ್ಜರಿ ಶತಕ ತಂಡದ ಉತ್ತಮ ಮೊತ್ತಕ್ಕೆ ಕಾರಣವಾಯಿತು.

ಬೌಂಡರಿಗಳು (20) ಹಾಗೂ ಸಿಕ್ಸರ್‌ (1) ಮೂಲಕವೇ ಆಯುಷ್‌ 86 ರನ್‌ ಕಲೆಹಾಕಿದ್ದು ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿ. ತಂಡ ಗಳಿಸಿದ ಒಟ್ಟು ಸ್ಕೋರ್‌ಗಳಲ್ಲಿ ಅರ್ಧದಷ್ಟು ರನ್‌ಗಳನ್ನು ಆಯುಷ್‌ ಹೊಡೆದು ಎದುರಾಳಿ ಬೌಲರ್‌ಗಳನ್ನು ಒತ್ತಡಕ್ಕೆ ಸಿಲುಕಿಸಿದರು.

ADVERTISEMENT

ಎದುರಾಳಿ ಶ್ರೀ ದುರ್ಗಾ ಸ್ಪೋರ್ಟ್ಸ್‌ ಅಕಾಡೆಮಿ ತಂಡದ ಆಟಗಾರರು ಗೆಲುವಿನ ಗುರಿ ಮುಟ್ಟಲು ಸಾಕಷ್ಟು ಹೋರಾಟ ಮಾಡಿದರು. ಆಫ್ರಿದ್‌ ಪಿ.ಆರ್‌. 68 ಎಸೆತಗಳಲ್ಲಿ 71 ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಡುವ ಭರವಸೆ ಮೂಡಿಸಿದ್ದರು. ಇವರ ಪ್ರಯತ್ನ ಸಾಕಾಗಲಿಲ್ಲ. ದುರ್ಗಾ ಅಕಾಡೆಮಿ ಅಂತಿಮವಾಗಿ 35.5 ಓವರ್‌ಗಳಲ್ಲಿ 179 ರನ್‌ ಕಲೆಹಾಕಿ ಆಲೌಟ್‌ ಆಗಿ ತನ್ನ ಹೋರಾಟ ಮುಗಿಸಿತು.

ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಆಯುಷ್‌ ಬೌಲಿಂಗ್‌ನಲ್ಲಿಯೂ ಮಿಂಚಿ ಮೂರು ವಿಕೆಟ್‌ ಕಬಳಿಸಿದರು. ಇದರಿಂದ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.