ADVERTISEMENT

ಬಾಲಕಿ ಕೊಲೆ: ಸಾರ್ವಜನಿಕರಿಂದ ಭಾರಿ ಪ್ರತಿಭಟನೆ

ಠಾಣೆ ಎದುರು ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 20:20 IST
Last Updated 13 ಏಪ್ರಿಲ್ 2025, 20:20 IST
   

ಹುಬ್ಬಳ್ಳಿ: 'ಐದು ವರ್ಷದ ಮಗುವಿನ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಬಿಹಾರ ಮೂಲದ ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕು' ಎಂದು ಆಗ್ರಹಿಸಿ ಭಾನುವಾರ ಇಲ್ಲಿನ ಅಶೋಕನಗರ ಪೊಲೀಸ್ ಠಾಣೆ ಎದುರು ವಿಜಯನಗರ, ಆದರ್ಶನಗರ, ಸಂತೋಷನಗರ, ದೇವಾಂಗಪೇಟೆ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. ಠಾಣೆ ಎದುರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ಮೂಲದ ಕುಟುಂಬವೊಂದು ಅನೇಕ ವರ್ಷಗಳ ಹಿಂದೆ ಹುಬ್ಬಳ್ಳಿಗೆ ಬಂದು ವಾಸವಾಗಿತ್ತು. ತಾಯಿ ಕೆಲವು ಮನೆಗಳಿಗೆ ತೆರಳಿ ಮನೆಗೆಲಸ ಮಾಡುತ್ತಿದ್ದರು. ಆ ವೇಳೆ ಚಿಕ್ಕ ಮಗಳನ್ನು ಕರೆದೊಯ್ಯುತ್ತಿದ್ದರು. ಮಗು ಮನೆಯ ಹೊರಗೆ ಆಟವಾಡುತ್ತಿದ್ದಾಗ, ಆರೋಪಿ ಅವಳನ್ನು ಅಪಹರಿಸಿದ್ದ. ಹಾಡಹಾಗಲೇ ನಡೆದ ಈ ಘಟನೆಯಿಂದ ಇಡೀ ನಗರವೇ ಬೆಚ್ಚಿಬಿದ್ದಿತ್ತು.

'ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ಎನ್ನುವ ಬದಲು, ನಮ್ಮೆದುರಿಗೇ ಗುಂಡು ಹೊಡೆದು ಸಾಯಿಸಬೇಕು.‌ ನಿಮ್ಮಿಂದ ಆಗದಿದ್ದರೆ, ಅವನನ್ನು ನಮಗೆ ಒಪ್ಪಿಸಿ, ತಕ್ಕ ಶಿಕ್ಷೆ ನೀಡುತ್ತೇವೆ' ಎಂದು ಪ್ರತಿಭಟನಕಾರರು ಕಿಡಿಕಾರಿದರು. ಅವರನ್ನು ಸಮಾಧಾನ ಪಡಿಸಲು ಪೊಲೀಸ್ ಕಮಿಷನರ್ ಹಾಗೂ ಹಿರಿಯ ಅಧಿಕಾರಿಗಳು   ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು.

ADVERTISEMENT

ಮಧ್ಯಾಹ್ನ 2 ಗಂಟೆಗೆ ಆರಂಭವಾದ ಪ್ರತಿಭಟನೆ ಸಂಜೆ 5.30ರವರೆಗೂ ಮುಂದುವರಿದಿತ್ತು. ಕೆಲ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ಮಾಡುತ್ತ ಠಾಣೆ ಎದುರು ಜಮಾಯಿಸಿದವು.  ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಪಕ್ಷಾತೀತವಾಗಿ ಮುಖಂಡರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  ಮಹಿಳಾ ಸಂಘಟನೆಗಳು ಸೇರಿದಂತೆ ಕೆಲ ಸಂಘಟನೆಯವರು ಪ್ರತಿಭಟನಾ ಮೆರವಣಿಗೆ ಮಾಡಿ ಠಾಣೆ ಎದುರು ಜಮಾಯಿಸಿ ಟೈರ್‌ಗೆ ಬೆಂಕಿ ಹಚ್ಚಿ, ವಾಹನ ಸಂಚಾರ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರ ಮತ್ತು ಪ್ರತಿಭಟನಕಾರರ ನಡುವೆ ವಾಗ್ವಾದ ನಡೆದು, ನೂಕುನುಗ್ಗಲು ಏರ್ಪಟ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸ್ ಕಮೀಷನರ್ ಎನ್.‌ ಶಶಿಕುಮಾರ್ ಸ್ಥಳಕ್ಕೆ ಬಂದು, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಪ್ರತಿಭಟನಕಾರರು, ‘ಏನು ಕಾನೂನು ಕ್ರಮ ಕೈಗೊಳ್ಳುತ್ತೀರಿ ಎನ್ನುವುದನ್ನು ಬಹಿರಂಗಪಡಿಸಬೇಕು’ ಎಂದು ಪಟ್ಟು ಹಿಡಿದರು. ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ಮುಂದುವರಿಸಿದರು.

‘ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ಎನ್ನುವ ಬದಲು, ನಮ್ಮೆದುರಿಗೇ ಗುಂಡು ಹೊಡೆದು ಸಾಯಿಸಬೇಕು.‌ ನಿಮ್ಮಿಂದ ಆಗದಿದ್ದರೆ, ಅವನನ್ನು ನಮಗೆ ಒಪ್ಪಿಸಿ, ತಕ್ಕ ಶಿಕ್ಷೆ ನೀಡುತ್ತೇವೆ’ ಎಂದರು.

ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು, ನಾಲ್ಕು-ಐದು ಸುತ್ತು ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರೂ, ಫಲಕಾರಿಯಾಗಲಿಲ್ಲ. ಸಂಜೆಯವರೆಗೂ ಠಾಣೆ ಎದುರು ಪ್ರತಿಭಟನೆ ಮುಂದುವರಿದಿತ್ತು. ನಂತರ ಚನ್ನಮ್ಮ ವೃತ್ತ ಹಾಗೂ ಕೆಎಂಸಿ–ಆರ್‌ಐ ಆಸ್ಪತ್ರೆ ಎದುರಿನ ಹುಬ್ಬಳ್ಳಿ–ಧಾರವಾಡ ಮುಖ್ಯ ರಸ್ತೆ ಬಂದ್ ಮಾಡಿ ರಾತ್ರಿಯವರೆಗೂ ಪ್ರತಿಭಟನೆ ನಡೆಸಿದರು.  ಕಾಂಗ್ರೆಸ್ ಮುಖಂಡ ಪ್ರೊ. ಐ.ಜಿ. ಸನದಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಪಾಲಿಕೆ ಸದಸ್ಯರಾದ ಸುವರ್ಣಾ ಕಲ್ಲಕುಂಟ್ಲಾ, ನಿರಂಜನ ಹಿರೇಮಠ, ಕಾಂಗ್ರೆಸ್ ಮುಖಂಡ ಅನಿಲಕುಮಾರ ಪಾಟೀಲ ಹಾಗೂ ಮಾರುತಿ ದೊಡ್ಡಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.  

ಸಾರ್ವಜನಿಕರ ಸಂಭ್ರಮ

ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್‌ ಘಟಕದಲ್ಲಿ ಇದು ಮೊದಲನೇ ಎನ್‌ಕೌಂಟರ್‌ ಆಗಿದ್ದು, ಇಂಥ ಕೃತ್ಯ ಎಸಗುವವರಿಗೆ ತಕ್ಕ ಸಂದೇಶ ರವಾನೆಯಾಗಿದೆ ಎಂದು ಸಾರ್ವಜನಿಕರು ಸಂಭ್ರಮಿಸಿದರು.

ಈ ಹಿಂದೆ ವಿದ್ಯಾರ್ಥಿ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಅವರನ್ನು ಕೊಲೆ ಮಾಡಿದಾಗಲೂ, ಆರೋಪಿಗಳನ್ನು ಎನ್‌ಕೌಂಟರ್‌ ಮಾಡಬೇಕು ಎಂದು ಪ್ರತಿಭಟಿಸಲಾಗಿತ್ತು. ಆದರೆ, ಅಂದಿನ ಪೊಲೀಸರು ಮೃದು ಧೋರಣೆ ಅನುಸರಿಸಿ ಆರೋಪಿಗಳ ರಕ್ಷಣೆಗೆ ಮುಂದಾದರು. ಆದರೆ, ಈ ಬಾರಿ ಪೊಲೀಸರ ಗಟ್ಟಿ ನಿರ್ಧಾರ ಮೆಚ್ಚುವಂತಹದ್ದಾಗಿದೆ’ ಎಂದು ಕರ್ನಾಟಕ ದಲಿತ ವಿಮೋಚನಾ ಸಮಿತಿ ಶ್ರೀಧರ ಕಂದಗಲ್‌ ಹೇಳಿದರು.

‘ಅತ್ಯಾಚಾರ ಪ್ರಕರಣದಲ್ಲಿ ಹಾಗೂ ಅಂಥ ಮನಸ್ಥಿತಿಯ ವ್ಯಕ್ತಿಗಳಿಗೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸರು ಕಠಿಣ ಸಂದೇಶ ರವಾನಿಸಿದ್ದಾರೆ. ಇಂಥ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ತಕ್ಷಣ ಎನ್‌ಕೌಂಟರ್‌ ಮಾಡಬೇಕು. ಆಗ ಮಹಿಳೆಯರಿಗೆ ರಕ್ಷಣೆ ಸಿಗಲಿದೆ’ ಎಂದು ಅನಿತಾ ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ, ಹಲ್ಲೆ, ಅತ್ಯಾಚಾರದಂತಹ ಕೃತ್ಯಗಳು ನಡೆಯುತ್ತಲೇ ಇವೆ. ಆದರೆ, ರಾಜ್ಯ ಸರ್ಕಾರ ಮಾತ್ರ ಹನಿಟ್ರ್ಯಾಪ್‌ ಮಾಡುವ, ಖಜಾನೆ ಲೂಟಿ ಮಾಡುವ, ಹಿಂದೂ ಧರ್ಮವನ್ನು ಒಡೆಯುವ, ಮುಸ್ಲಿಮರನ್ನು ಓಲೈಸುವಂತಹ ನೀಚ ಕೆಲಸಗಳಲ್ಲಿ ಮಗ್ನವಾಗಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ದೂರಿದರು.

‘ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯನ್ನು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ ಮಾಡಿರುವುದು ಶ್ಲಾಘನೀಯ. ಆರೋಪಿ ಯಾರೇ ಇರಲಿ ಸಮಾಜಘಾತುಕ ಶಕ್ತಿಗಳಿಗೆ ಇದೇ ಸರಿಯಾದ ಶಿಕ್ಷೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.