ಹುಬ್ಬಳ್ಳಿ: ಸ್ನಾತಕೋತ್ತರ ಪದವೀಧರನೊಬ್ಬ ಕೃಷಿಯಲ್ಲಿ ತೊಡಗಿ, ದನ, ಕರು ಮೇಯಿಸಲು ಮುಂದಾದಾಗ ನಕ್ಕವರೇ ಹೆಚ್ಚು. ಕಾಲೇಜಿನಲ್ಲಿ ಉಪನ್ಯಾಸ ಮಾಡಬೇಕಾದವ ದನ ಕಾಯುತ್ತಿದ್ದಾನೆ ಎಂದು ಹೀಯಾಳಿಸಿದವರೂ ಉಂಟು...
ಇವೆಲ್ಲಕ್ಕೂ ಕಿವಿಗೊಡದೆ, ಶ್ರದ್ಧೆ ಮತ್ತು ತಾಳ್ಮೆಯಿಂದ ಕೃಷಿ ಚಟುವಟಿಕೆ ಮಾಡಿದವರು ಶೌಕತ್‌ಅಲಿ ಲಂಬೂನವರ. ನವಲಗುಂದ ತಾಲ್ಲೂಕಿನ ನಾಗನೂರ ಗ್ರಾಮದ ರೈತರಾದ ಅವರು ಬಿಎ, ಬಿ.ಇಡಿ, ಎಂ.ಎ, ಎಂ.ಇಡಿ ಮತ್ತು ಪಿಎಚ್.ಡಿ ಪದವೀಧರರು ಕೂಡ ಹೌದು. ರಾಸಾಯನಿಕ ಅಂಶಗಳನ್ನು ಬೆಳೆಸದೇ ಕೃಷಿ ಕಾರ್ಯದಲ್ಲಿ ತೊಡಗಿರುವ ಅವರು ಮಿಶ್ರ ಬೆಳೆಗಾರರಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಎರಡು ಎಕರೆ ಒಣ ಬೇಸಾಯದ ಜಮೀನಿನಲ್ಲೇ ಮಣ್ಣು, ನೀರು ಮತ್ತು ಪರಿಸರವನ್ನು ಉಳಿಸುವ ಸಹಜ ಮತ್ತು ಅರಣ್ಯ ಕೃಷಿ ಕೃಷಿ ಮಾಡುತ್ತಿದ್ದಾರೆ. ಕೃಷಿ ಹೊಂಡ ಕಟ್ಟಿಕೊಂಡು ಸೌರಶಕ್ತಿ, ಹೊಸ ತಂತ್ರಜ್ಞಾನ ಬಳಸಿ ನೂತನ ಅವಿಷ್ಕಾರಗಳಿಂದ ಭೂಮಿಯನ್ನು ಹೊನ್ನಹೊಲವಾಗಿಸಿದ್ದಾರೆ.
ಮಾವು, ಪೇರಲ, ಸೇಬು, ಚಕ್ಕೋತ, ಪಪ್ಪಾಯ, ಕಲ್ಲಂಗಡಿ, ತೆಂಗು, ಬಾಳೆ, ತೇಗು, ಶ್ರೀಗಂಧ, ಬೇವು, ಹೆಬ್ಬೇವು, ಕಾಯಿಪಲ್ಲೆ, ಕರಿಬೇವು, ನುಗ್ಗೆ, ಎಲೆ ಬಳ್ಳಿ, ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಜೊತೆಗೆ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಮೀನುಮರಿ ಸಾಕಾಣಿಕೆ ಮಾಡಿ ಮಾರಾಟವೂ ಮಡುತ್ತಾರೆ.
ಕೈಹಿಡಿದ ಮೀನುಗಾರಿಕೆ: ಕಳೆದ ಐದಾರು ವರ್ಷಗಳಿಂದ ಮೀನುಗಾರಿಕೆಯಲ್ಲಿ ತೊಡಗಿರುವ ಶೌಕತ್‌ಅಲಿ ಅವರು ವಿವಿಧ ಜಿಲ್ಲೆಗಳಿಂದ ಕಟ್ಲಾ, ರೊಹೊ ಸೇರಿ ವಿವಿಧ ತಳಿಯ ಅಂದಾಜು 1,000 ಮೀನು ಮರಿಗಳನ್ನು ₹450ರಂತೆ ತಂದು ಸಾಕಿ, ಮಾರುತ್ತಿದ್ದಾರೆ. ಕಳೆದ ವರ್ಷದಿಂದ ಸ್ಪಾನ್ ಮೀನುಮರಿಗಳ ಸಾಕಾಣಿಕೆ ಮಾಡುತ್ತಿದ್ದಾರೆ. ಹತ್ತಿರದ ರೈತರಿಗೂ ಮೀನುಮರಿಗಳನ್ನು ಮಾರುತ್ತಾರೆ. ಇದರಿಂದ ವರ್ಷಕ್ಕೆ ₹ 2 ಲಕ್ಷ ಆದಾಯ ಗಳಿಸುತ್ತಾರೆ.
ಕೋಳಿ ಸಾಕಾಣಿಕೆ: 300 ಜವಾರಿ ಕೋಳಿಗಳನ್ನು ಸಾಕಿದ್ದಾರೆ. ₹10ಕ್ಕೆ 1 ಮೊಟ್ಟೆ ಮಾರುವ ಅವರು ವರ್ಷಕ್ಕೆ ಅಂದಾಜು 1.35 ಲಕ್ಷ ಮೊಟ್ಟೆ, ₹850ಕ್ಕೆ ಒಂದರಂತೆ 500 ಹುಂಜಗಳನ್ನು ಮಾರಾಟ ಮಾಡುತ್ತಾರೆ. ಕೋಳಿ ಸಾಕಾಣಿಕೆ ಚಿಕ್ಕ ಎಟಿಎಂ ಇದ್ದಂತೆ. ಒಂದು ಕೋಳಿಯಿಂದ ವರ್ಷಕ್ಕೆ ಅಂದಾಜು ₹12 ಸಾವಿರ ಆದಾಯ ಸಿಗುತ್ತದೆ. ಜಮೀನಿಗೆ ಕೋಳಿಗೊಬ್ಬರ ಹಾಕುತ್ತೇವೆ. ಮೀನುಗಳಿಗೂ ಇದೇ ಆಹಾರವಾಗುತ್ತದೆ’ ಎನ್ನುವ ಮಾತು ರೈತ ಶೌಕತ್‌ಅಲಿ ಅವರದ್ದು.
ಬೆಳೆ ಬೆಳವಣಿಗೆಗೆ ಸಹಾಯ: ಗೋಮೂತ್ರ, ಗೋಮಯ, ಜಾಗ್ರೆಯ ಅಳುಬೆ, ಮಡುಸಕ್ಕರೆ, ಸ್ಥಳೀಯ ಮಣ್ಣಿನಿಂದ ತಯಾರಿಸಿದ ದ್ರಾವಣ ಬಳಸುತ್ತಾರೆ. ಇದು ಮಣ್ಣಿನ ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚಿಸಿ, ಬೆಳೆ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೀಜ ಶುದ್ಧೀಕರಣಕ್ಕಾಗಿ ಗೋಮೂತ್ರ, ನಿಂಬೆರಸ ಮತ್ತು ಇತರ ಸ್ಥಳೀಯ ಪದಾರ್ಥಗಳಿಂದ ತಯಾರಿಸಿದ ದ್ರಾವಣ ಬಳಸುತ್ತಾರೆ. ಇದು ಬೆಳೆಯ ಆರಂಭಿಕ ಬೆಳವಣಿಗೆಯಲ್ಲಿ ರೋಗ ನಿರೋಧಕ ಶಕ್ತಿ ನೀಡುತ್ತದೆ.
ಬದು ನಿರ್ಮಾಣಕ್ಕೆ ಒತ್ತು ನೀಡಿದ್ದು, ಸ್ವಂತ ಖರ್ಚಿನಲ್ಲಿ ಎರಡು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಮಗ್ರ ಕೃಷಿಯಿಂದ ವಾರ್ಷಿಕವಾಗಿ ಅಂದಾಜು ₹5 ಲಕ್ಷ ಆದಾಯ ಸಿಗುತ್ತಿದ್ದು, ಈ ವರ್ಷ ಹೆಚ್ಚೆ ಶ್ರಮವಹಿಸಿ, ಕಾಳಜಿಯಿಂದ ದುಡಿಮೆ ಮಾಡಿರುವ ಈ ರೈತ ₹10 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ರೈತ ವೈವಿಧ್ಯಮಯ ಬೆಳೆಗಳನ್ನು ಬೆಳೆದು ಆಧುನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿದಾಗ ಮಾತ್ರ ನಿರಂತರ ಆದಾಯ ಬದುಕು ಕಂಡುಕೊಳ್ಳಬಹುದು.ಶೌಕತ್‌ಅಲಿ ಲಂಬೂನವರ ಪ್ರಗತಿಪರ ರೈತ
ಕೃಷಿಗೆ ಪೂರಕ ಜೇನು ಸಾಕಾಣಿಕೆ
‘ಪರಾಗಸ್ಪರ್ಶ ಕ್ರಿಯೆಗೆ ಜೇನುನೋಣಗಳು ಅಗತ್ಯ. ಹಾಗಾಗಿ ಮೂರು ವರ್ಷಗಳಿಂದ ಸದ್ಯ ಒಂದು ಪೆಟ್ಟಿಗೆ ಜೇನು ಸಾಕಾಣಿಕೆ ಮಾಡುತ್ತಿರುವೆ. ಒಂದು ಲೀಟರ್ ಜೇನುತುಪ್ಪಕ್ಕೆ ₹1 ಸಾವಿರದಂತೆ ಮಾರುತ್ತಿರುವೆ’ ಎಂದು ರೈತ ಶೌಕತ್ಅಲಿ ‘ಪ್ರಜಾವಾಣಿ’ಗೆ ತಿಳಿಸಿದರು. ತರಬೇತಿ: ಸಹಜ ಕೃಷಿ ಬಗ್ಗೆ ವಿವಿಧ ಇಲಾಖೆಗಳು ಆಯೋಜಿಸುವ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ ರೈತರಿಗೆ ಮಾಹಿತಿ ನೀಡುತ್ತ ಬಂದಿದ್ದಾರೆ. ಹಲವು ಕೃತಿಗಳನ್ನು ರಚಿಸಿರುವ ಇವರು 2023ರಲ್ಲಿ ಧಾರವಾಡ ಜಿಲ್ಲಾ ‘ಶ್ರೇಷ್ಠ ಕೃಷಿಕ ಪ್ರಶಸ್ತಿ’ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಸಂಪರ್ಕಕ್ಕೆ: ಮೊ.80885 86463
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.