ADVERTISEMENT

ಹುಬ್ಬಳ್ಳಿ | ಮೇಲ್ಸೇತುವೆ ಕಾಮಗಾರಿ; ಸಂಚಾರ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 5:51 IST
Last Updated 8 ಏಪ್ರಿಲ್ 2025, 5:51 IST

ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯ ನೀಲಿಜಿನ್‌ ರಸ್ತೆಯಲ್ಲಿ ಸೋಮವಾರ ವಾಹನಗಳ ಸಂಚಾರ ದಟ್ಟಣೆ ಉಂಟಾದ ದೃಶ್ಯ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯ ನೀಲಿಜಿನ್‌ ರಸ್ತೆಯಲ್ಲಿ ಸೋಮವಾರ ವಾಹನಗಳ ಸಂಚಾರ ದಟ್ಟಣೆ ಉಂಟಾದ ದೃಶ್ಯ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ನಗರದಲ್ಲಿ ಪ್ರಗತಿಯಲ್ಲಿರುವ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಏಪ್ರಿಲ್ 20 ರಿಂದ 4 ತಿಂಗಳವರೆಗೆ ರಾಣಿ ಚನ್ನಮ್ಮ ವೃತ್ತದಲ್ಲಿ ವಾಹನಗಳ ಸಂಚಾರ ಬಂದ್‌ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಪ್ರಮುಖ ಏಳು ರಸ್ತೆಗಳ ಕೂಡು ವೃತ್ತ ಇದಾಗಿದ್ದು, ವಾಹನಗಳ ಸುಗಮ ಸಂಚಾರ ತೀವ್ರ ಅಸ್ತವ್ಯಸ್ತವಾಗಲಿದೆ.

ADVERTISEMENT

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಗಸ್ಟ್‌ 19ರವರೆಗೆ ಕಾಮಗಾರಿ ನಡೆದಿರುವ ಗಾಳಿ ದುರ್ಗಮ್ಮ ದೇವಸ್ಥಾನದಿಂದ ವಿಜಯಪುರ ರಸ್ತೆವರೆ ಗಿನ ವಾಹನ ಸಂಚಾರ ನಿಯಂತ್ರಿ ಸಲು ತೀರ್ಮಾನಿಸಲಾಗಿತ್ತು. ಈಗಾಗಲೇ ಉಪ ನಗರ ಸಾರಿಗೆ ಬಸ್‌ ನಿಲ್ದಾಣದ ಅಯೋಧ್ಯಾ ಹೋಟೆಲ್‌ ಎದುರಿನ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಸಾರ್ವಜನಿಕರಿಗೆ ಮಾಹಿತಿ ನೀಡದೆ ಚನ್ನಮ್ಮ ವೃತ್ತದಲ್ಲಿ ಹಾಗೂ ಭಗತ್‌ ಸಿಂಗ್‌ ವೃತ್ತದಲ್ಲಿ ಏಕಾಏಕಿ ಬ್ಯಾರಿಕೇಡ್‌ ಅಳವಡಿಸಿ, ಸಂಚಾರ ನಿಷೇಧಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಯಾವ ರಸ್ತೆಯಲ್ಲಿ ಸಾಗಿದರೆ, ಎಲ್ಲಿಗೆ ತಲುಪುತ್ತೇವೆ ಎಂಬ ಗೊಂದಲ ಸವಾರರಲ್ಲಿ ಮೂಡಿದೆ. ಬೆಂಗಳೂರು, ಕಾರವಾರ, ಗದಗ ರಸ್ತೆಯಿಂದ ಚನ್ನಮ್ಮ ವೃತ್ತದ ಮೂಲಕ ಬಂದು ವಿದ್ಯಾನಗರ, ಧಾರವಾಡಕ್ಕೆ ತೆರಳುವ ಸವಾರರು, ಚನ್ನಮ್ಮ ವೃತ್ತದಿಂದ ಮುಂದೆ ಹೇಗೆ ತೆರಳಬೇಕು ಎಂದು ತಿಳಿಯದೆ ಪರದಾಡುತ್ತಿದ್ದಾರೆ.

ಸದ್ಯ ಅಯೋಧ್ಯಾ ಹೋಟೆಲ್‌ ಎದುರಿನ ಒಂದು ರಸ್ತೆಯನ್ನು ಮಾತ್ರ ಬಂದ್‌ ಮಾಡಲಾಗಿದೆ. ಪರಿಣಾಮ, ನೀಲಿಜಿನ್‌ ರಸ್ತೆ ಮತ್ತು ದೇಶಪಾಂಡೆ ನಗರದ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿವೆ. ಧಾರವಾಡ, ಗೋಕುಲ ರಸ್ತೆ ಕಡೆಯಿಂದ ಬಂದು ನಗರದ ದಾಜೀಬಾನ್‌, ದುರ್ಗದ ಬೈಲ್‌ ಮಾರುಕಟ್ಟೆಗೆ ತೆರಳುವ ವಾಹನ ಸವಾರರೆಲ್ಲ ಈಗ ನೀಲಿಜಿನ್‌ ರಸ್ತೆಯನ್ನೇ ಅವಲಂಬಿಸಬೇಕಿದೆ. ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಈ ರಸ್ತೆ ಸಂಪೂರ್ಣ ದಟ್ಟಣೆಯಿಂದ ತುಂಬಿರುತ್ತದೆ. ಚಿಗರಿ ಬಸ್‌, ನಗರ ಸಾರಿಗೆ ಬಸ್‌ ಹಾಗೂ ಬೇಂದ್ರೆ ಬಸ್‌ ಸಹ ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ, ಸವಾರರು ಹಾಗೂ ಪಾದಚಾರಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ.

‘ಮಾರುಕಟ್ಟೆ ಪ್ರದೇಶಗಳಿಗೆ ತೆರಳಲು ಪರ್ಯಾಯ ಮಾರ್ಗ ಇಲ್ಲದ ಕಾರಣ, ಮುಂದಿನ ನಾಲ್ಕು ತಿಂಗಳು ನಗರದಲ್ಲಿ ಸಂಚಾರ ಸುವ್ಯವಸ್ಥೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಲಿದೆ’ ಎಂದು ಪೊಲೀಸರೇ ಹೇಳುತ್ತಾರೆ.

‘ಏಪ್ರಿಲ್‌ 20ರಿಂದ ಚನ್ನಮ್ಮ ವೃತ್ತ ಸೇರಿ ಕೋರ್ಟ್‌ ವೃತ್ತ, ಬಸವವನ ವೃತ್ತದ ಸುತ್ತಮುತ್ತಲಿನ ರಸ್ತೆಗಳನ್ನು ಸಂಪೂರ್ಣ ಬಂದ್‌ ಮಾಡಿ, ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲು ಪೊಲೀಸ್‌ ಇಲಾಖೆ, ವಿವಿಧ ಇಲಾಖೆಗಳ ಜೊತೆ ಚರ್ಚಿಸಿ ಯೋಜನೆ ರೂಪಿಸಲು ಮುಂದಾಗಿದೆ. ವೈಜ್ಞಾನಿಕವಾಗಿ ಮಾರ್ಗ ಬದಲಾವಣೆ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಆ ಅವಧಿಯಲ್ಲಿ ಏಕಮುಖ–ದ್ವಿಮುಖ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಬೇಕು. ನಗರದ ಒಳಗೆ ಬೃಹತ್‌ ವಾಹನಗಳಿಗೆ ಪ್ರವೇಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಕಾರು ಚಾಲಕ ಶಿವಾನಂದ ದಂಡಪಲ್ಲಿ ಹೇಳಿದರು.

ವ್ಯಾಪಾರ ಸ್ಥಗಿತ; ಅಂಗಡಿಗಳು ಬಂದ್‌

ಮೇಲ್ಸೇತುವೆ ಕಾಮಗಾರಿಯಿಂದ ಚನ್ನಮ್ಮ ವೃತ್ತದ ಸುತ್ತಮುತ್ತ ಹಾಗೂ ಉಪನಗರ ಸಾರಿಗೆ ಬಸ್‌ ನಿಲ್ದಾಣದ ಎದುರಿನ ವಾಣಿಜ್ಯ ಮಳಿಗೆಗಳು ಒಂದೊಂದಾಗಿ ಬಂದ್‌ ಆಗುತ್ತಿವೆ.

‘ಜನ ಮತ್ತು ವಾಹನಗಳ ಸಂಚಾರವಿಲ್ಲದೆ ಹಾಗೂ ರಸ್ತೆಯನ್ನು ಸಂಪೂರ್ಣ ಅಗೆದಿರುವುದರಿಂದ ವ್ಯಾಪಾರ–ವಹಿವಾಟು ಇಲ್ಲದೆ ವ್ಯಾಪಾರಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲಿರುವ ವಾಣಿಜ್ಯ ಕಟ್ಟಡದಲ್ಲಿನ ಮೊಬೈಲ್‌ ಅಂಗಡಿ, ಉಪಾಹಾರ ಗೃಹ, ಬೇಕರಿ ಅಂಗಡಿ, ಆಟೊ ಮೊಬೈಲ್‌ ಶಾಪ್‌, ಬಟ್ಟೆ ಅಂಗಡಿ ಸೇರಿದಂತೆ ಬಹುತೇಕ ಅಂಗಡಿಗಳ ಮಾಲೀಕರು, ಬಾಡಿಗೆ ಹಣ ಕಟ್ಟಲು ಆಗದೆ ಬಂದ್‌ ಮಾಡಿಕೊಂಡು ಹೋಗಿದ್ದಾರೆ. ಬಸ್‌ ನಿಲ್ದಾಣ ಸಹ ಬಂದ್‌ ಆಗುವುದರಿಂದ ಮುಂದಿನ ನಾಲ್ಕು ತಿಂಗಳು ಉಳಿದ ವ್ಯಾಪಾರಸ್ಥರು ಮತ್ತಷ್ಟು ಸಮಸ್ಯೆ ಎದುರಿಸಬೇಕಾಗಬಹುದು’ ಎಂದು ಬೇಕರಿ ಅಂಗಡಿಯ ಮಾಲೀಕ ನಿಜಗುಣಸ್ವಾಮಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.