ಹುಬ್ಬಳ್ಳಿ: ‘ಮನೆಯಂಗಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ದೌರ್ಜನ್ಯ ನಡೆಸಿ ಕೊಲೆ ಮಾಡಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಹೀನಕೃತ್ಯವಾಗಿದೆ’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಘಟನೆಯನ್ನು ಖಂಡಿಸಿದ್ದಾರೆ.
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ, ಹಲ್ಲೆ, ಅತ್ಯಾಚಾರದಂತಹ ಕೃತ್ಯಗಳು ನಡೆಯುತ್ತಲೇ ಇವೆ. ಆದರೆ, ರಾಜ್ಯ ಸರ್ಕಾರ ಮಾತ್ರ ಹನಿಟ್ರ್ಯಾಪ್ ಮಾಡುವ, ಖಜಾನೆ ಲೂಟಿ ಮಾಡುವ, ಹಿಂದೂ ಧರ್ಮವನ್ನು ಒಡೆಯುವ, ಮುಸ್ಲಿಮರನ್ನು ಓಲೈಸುವಂತಹ ನೀಚ ಕೆಲಸಗಳಲ್ಲಿ ಮಗ್ನವಾಗಿದೆ’ ಎಂದು ಅವರು ದೂರಿದ್ದಾರೆ.
‘ಬೆಂಗಳೂರು, ಕಲಬುರ್ಗಿ ಸೇರಿದಂತೆ ರಾಜ್ಯದ ಹಲವೆಡೆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರು ಆಡಿರುವ ಉಡಾಫೆಯ ಮಾತುಗಳು ಅತ್ಯಾಚಾರಿಗಳಿಗೆ ಕಾನೂನಿನ ಬಗ್ಗೆ ಯಾವುದೇ ಭಯವಿಲ್ಲದಂತೆ ಮಾಡಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಇಂತಹ ಘಟನೆಗಳಿಂದಾಗಿ ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಪೋಷಕರು ಭಯ ಪಡುವಂತಹ ಭೀತಿಯ ವಾತಾವರಣ ಉಂಟಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಪೊಲೀಸರ ಕಾರ್ಯ ಪ್ರಶಂಸನೀಯ: ‘ಬಾಲಕಿ ಮೇಲೆ ದೌರ್ಜನ್ಯ ನಡೆಸಿ, ಆಕೆಯನ್ನು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿರುವುದು ಶ್ಲಾಘನೀಯ. ಆರೋಪಿ ಯಾರೇ ಇರಲಿ ಸಮಾಜಘಾತುಕ ಶಕ್ತಿಗಳಿಗೆ ಇದೇ ಸರಿಯಾದ ಶಿಕ್ಷೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
‘ಮನೆಯಂಗಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿರುವುದು ನ್ಯಾಯೋಚಿತವಾಗಿದೆ. ಆಕ್ರೋಶ ಮಡುಗಟ್ಟಿದ್ದ ಜನರ ಭಾವನೆಗಳಿಗೆ ನೆಮ್ಮದಿ ನೀಡಿದೆ. ಈ ಪ್ರಕರಣದಲ್ಲಿ ಪೊಲೀಸರ ಕಾರ್ಯ ಪ್ರಶಂಸನೀಯವಾಗಿದೆ’ ಎಂದು ಕಾಂಗ್ರೆಸ್ ಮುಖಂಡರಾದ ವೀರೇಶ್ ಉಂಡಿ ಹಾಗೂ ರಜತ ಉಳ್ಳಾಗಡ್ಡಿ ತಿಳಿಸಿದ್ದಾರೆ.
- ‘ಅತ್ಯಾಚಾರಕ್ಕೆ ಯತ್ನ ಕೊಲೆ; ಹೀನ ಕೃತ್ಯ’
ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವುದು ಹೀನ ಕೃತ್ಯ. ಇಂತಹ ಅಮಾನುಷ ಕೃತ್ಯಗಳು ಮರುಕಳಿಸುತ್ತಿರುವುದು ಕಳವಳಕಾರಿ ಸಂಗತಿ. ಅವಳಿ ನಗರದ ಜನ ಜಾತಿ ಮತ ಹಾಗೂ ರಾಜಕೀಯವನ್ನು ಬದಿಗಿಟ್ಟು ನಾಗರಿಕ ಸಮಾಜ ತಲೆತಗ್ಗಿಸುವಂತಹ ಇಂತಹ ಪೈಶಾಚಿಕ ಕೃತ್ಯದ ವಿರುದ್ಧ ಒಗ್ಗಟ್ಟಾಗಿ ನಿಂತು ಬಾಲಕಿಯ ಸಾವಿಗೆ ನ್ಯಾಯ ಒದಗಿಸುವಂತೆ ಬೀದಿಗಿಳಿದದ್ದು ಉತ್ತಮ ನಡೆ. ರಾಕ್ಷಸ ಪ್ರವೃತ್ತಿಯುಳ್ಳವರು ಸಮಾಜದಲ್ಲಿ ಬದುಕಲು ಅನರ್ಹರು ಯಾವುದೇ ಕ್ಷಮಾಪಣೆ ಅಥವಾ ಕನಿಕರಕ್ಕೆ ಅರ್ಹರಲ್ಲ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯ. ಈ ಜವಾಬ್ದಾರಿ ಸರ್ಕಾರದ ಜೊತೆಗೆ ಪ್ರತಿಯೊಬ್ಬ ನಾಗರಿಕನದ್ದೂ ಹೌದು. -ಅರವಿಂದ ಬೆಲ್ಲದ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.